ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಕೇರಳದ ವಯನಾಡು ಕ್ಷೇತ್ರದಲ್ಲಿ (Wayanad Constituecy) ಭರ್ಜರಿ ರೋಡ್ ಶೋ ನಡೆಸಿದ್ದಾರೆ.
ಇಲ್ಲಿನ ಕಾಲ್‌ಪೆಟ್ಟಾ ಪಟ್ಟಣದಲ್ಲಿ ʻಸತ್ಯಮೇವ ಜಯತೆʼ ರೋಡ್ ಶೋ (Rahul Gandhi RoadShow) ನಡೆಸಿದ ರಾಹುಲ್ ಗಾಂಧಿ, ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ವಿರುದ್ಧ ಕೆಂಡಕಾರಿದ್ದಾರೆ.
ಸಂಸದ ಎಂಬುದು ಕೇವಲ ಒಂದು ಟ್ಯಾಗ್, ಒಂದು ಸ್ಥಾನ, ಹುದ್ದೆ ಅಷ್ಟೇ. ಬಿಜೆಪಿಯವರು ಆ ಟ್ಯಾಗ್ ಅನ್ನು ಕಿತ್ತುಕೊಳ್ಳಬಹುದು, ಮನೆಯನ್ನ ಕಸಿದುಕೊಳ್ಳಬಹುದು ಅಥವಾ ನನ್ನನ್ನ ಜೈಲಿಗೂ ಹಾಕಿಸಬಹುದು. ಆದರೆ ವಯನಾಡಿನ ಜನರನ್ನು ಪ್ರತಿನಿಧಿಸೋದನ್ನು ತಡೆಯೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಹಲವು ವರ್ಷಗಳಿಂದ ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇನೆ, ಇಷ್ಟು ವರ್ಷಗಳಾದರೂ ಅವರು ತಮ್ಮ ಎದುರಾಳಿಯನ್ನ ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರುವುದು, ನಾನು ಅವರಿಗೆ ಹೆದರುವುದಿಲ್ಲ ಎಂಬುದನ್ನ ಅರ್ಥಮಾಡಿಕೊಳ್ಳದೇ ಇರೋದು ನನಗೆ ಆಶ್ಚರ್ಯ ಎನಿಸಿದೆ. ವಯನಾಡಿನಲ್ಲಿ ಪ್ರವಾಹ ಬಂದಾಗ ನೂರಾರು ಜನರು ತಮ್ಮ ಮನೆಗಳನ್ನ ಕಳೆದುಕೊಂಡಿದ್ದರು. ಆ ಸಂದರ್ಭದಲ್ಲಿ ಬಿಜೆಪಿಯವರು ಹೇಗೆ ಸ್ಪಂದಿಸಿದ್ದೀರಿ ಎಂಬುದನ್ನ ನೋಡಿದ್ದೇನೆ. ನೀವು ನನ್ನ ಮನೆ ಕಸಿದುಕೊಂಡಿದ್ದರ ಬಗ್ಗೆ ನನಗೆ ಚಿಂತೆಯಿಲ್ಲ. ಆದ್ರೆ ಭಾರತದ ವಯನಾಡಿನ ಸಮಸ್ಯೆ ಎತ್ತುವುದನ್ನು ನಾನು ಮುಂದುವರಿಸುತ್ತೇನೆ ಎಂದಿದ್ದಾರೆ.
ಇಲ್ಲಿಯ ಜನರು ನಾನು ಕೇರಳಕ್ಕೆ ಸೇರಿದವನಲ್ಲ. ಆದರೂ ಅಪ್ಪಿಕೊಂಡು ಪ್ರೀತಿ, ವಾತ್ಸಲ್ಯ ತೋರಿಸಿದ ರೀತಿ ಮರೆಯಲು ಸಾಧ್ಯವಿಲ್ಲ. ನನ್ನನ್ನ ನಿಮ್ಮ ಮಗ, ಸಹೋದರ ಎನ್ನುವಂತೆ ಭಾವಿಸಿದಿರಿ. ಈ ಪ್ರೀತಿ ವಿಶ್ವಾಸ ಇದ್ದಿದ್ದರಿಂದಲೇ 4 ವರ್ಷಗಳ ಹಿಂದೆ ನಾನಿಲ್ಲಿಗೆ ಬಂದು ನಿಮ್ಮ ಸಂಸದನಾದೆ ಎಂದು ಭಾವುಕರಾದರು.
ಪ್ರತಿಯೊಂದು ಧರ್ಮ, ಸಮುದಾಯ ಹಾಗೂ ವಿಚಾರವನ್ನ ನಾನು ಗೌರವಿಸುತ್ತೇನೆ. ಯಾರು ಎಷ್ಟೇ ದುಷ್ಟರಾದರೂ ನಾನು ನನ್ನಿಂದ ಸಾಧ್ಯವಾದಷ್ಟು ಪ್ರೀತಿ ತೋರುತ್ತೇನೆ ಏಕೆಂದರೆ ಇದು ಭಾರತ ಎಂದು ನುಡಿದಿದ್ದಾರೆ.
ಪ್ರಿಯಾಂಕಾ ಗಾಂಧಿ (Priyanka Gandhi), ಕೇರಳ ಕಾಂಗ್ರೆಸ್ ನಾಯಕರು ರೋಡ್ ಶೋನಲ್ಲಿ ಪಾಲ್ಗೊಂಡಿದ್ದಾರೆ.