ರಾಜಕೀಯ ನಿವೃತ್ತಿ: ಈ ನಿರ್ಧಾರದ ಹಿಂದಿನ ಸತ್ಯ ಬಹಿರಂಗಪಡಿಸಿದ ಕೆಎಸ್ ಈಶ್ವರಪ್ಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ ತಮ್ಮ ನಿರ್ಧಾರ ಬಹಿರಂಗ ಪಡಿಸಿದ್ದರು. ಆದರೆ ಈಶ್ವರಪ್ಪ ರಾಜೀನಾಮೆಯಿಂದ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ. ಟೈಯರ್‌ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಈಶ್ವರಪ್ಪ ಮನೆ ಮುಂದೆ ಜಮಾಯಿಸಿ ಘೋಷಣೆ ಕೂಗಿದ್ದಾರೆ.

ಈಶ್ವರಪ್ಪ ಆಕ್ರೋಶಿತ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ. ಇದೇ ವೇಳೆ ರಾಜೀನಾಮೆ ನಿರ್ಧಾರದ ಹಿಂದಿನ ಅಸಲಿ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.
ತನ್ನ ನಿರ್ಧಾರ ದಿಢೀರ್ ನಿರ್ಧಾರವಲ್ಲ. 6 ತಿಂಗಳ ಹಿಂದೆ ನಿರ್ದಾರ ತೆಗೆದುಕೊಂಡಿದ್ದೇನೆ. ಚುನಾವಣಾ ಸಮಿತಿಯ ಮುಂದೆಯೂ ಹೇಳಿದ್ದ. ಆದರೆ ಸಮಿತಿ ಸ್ಪರ್ಧಿಸುವಂತೆ ಸೂಚಿಸಿತ್ತು. ಆದರೆ ನನಗೆ ಈಗ 75 ವರ್ಷ. ಚುನಾವಣೆಗೆ ನಿಂತರೆ 80 ವರ್ಷದವರೆಗೂ ಕೆಲಸ ಮಾಡಬೇಕು. ಇತ್ತ ನನ್ನ ಪತ್ನಿಯ ಆರೋಗ್ಯ ಕುರಿತು ಗಮನಹರಿಸಬೇಕು. ನನ್ನ ಪತ್ನಿಗೆ ಆರೋಗ್ಯ ಸರಿಯಿಲ್ಲದ ಹಿನ್ನೆಲೆ ಆಸ್ಪತ್ರೆಯಿಂದ ಮರಳಿದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ ಎಂದು ಈಶ್ವರಪ್ಪ ಬೆಂಬಲಿಗರು, ಕಾರ್ಯಕರ್ತರಿಗೆ ವಿವರಿಸಿದ್ದಾರೆ.
ಬೂತ್ ಮಟ್ಟದಿಂದ ಉಪಮುಖ್ಯಮಂತ್ರಿ ಸ್ಥಾನದವರೆಗೂ ನನ್ನನ್ನು ಬೆಂಬಲಿಸಿದ್ದೀರಿ. ನನ್ನ ಯಾವುದೇ ಸ್ಥಾನಕ್ಕೆ ಪರಿಗಣಿಸಬೇಡಿ ಎಂದು ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆದಿದ್ದೇನೆ. ನೀವು ಬೇಸರಗೊಂಡಿರುವುದು ನೋಡಿ ನನಗೂ ಬೇಸರವಾಗಿದೆ. ಸುಮಾರು 35 ಶಾಸಕರನ್ನು ಈ ಬಾರಿ ಪಟ್ಟಿಯಲ್ಲಿ ಕೈಬಿಡುತ್ತಿದ್ದಾರೆ ಅನ್ನೋ ಮಾಹಿತಿ ಇದೆ. ನನ್ನನ್ನು ತೆಗೆದು ಹಾಕಿದರೆ ಚೆನ್ನಾಗಿತ್ತು ಅನ್ನೋ ಅಭಿಪ್ರಾಯ ರಾಷ್ಟ್ರೀಯ ಅಧ್ಯಕ್ಷರು ಹೇಳುವ ಮೊದಲು ರಾಜೀನಾಮೆ ನೀಡಿ ಮಾರ್ಯದೆ ಉಳಿಸಿಕೊಂಡಿದ್ದೇನೆ. ಮೂಲೆಯಲ್ಲಿ ಬಿದ್ದಂತ ನನ್ನನ್ನು ಬೆಳಕಿಗೆ ತಂದಿದ್ದು ಪಕ್ಷ. ಪಕ್ಷ ತೆಗೆದುಕೊಂಡ ತೀರ್ಮಾನಕ್ಕೆ ವಿರುದ್ಧವಾಗಿ ನಡೆದುಕೊಂಡರೆ ತಂದೆ-ತಾಯಿಗೆ ದ್ರೋಹ ಬಗೆದಂತೆ. ಪಕ್ಷದ ಮಾತು ತಾಯಿಗೆ ಸಮಾನ. ಅದನ್ನು ಮೀರುತ್ತೀರಾ ಎಂದು ಈಶ್ವರಪ್ಪ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.

ತಾನು ಚುನಾವಣೆಯಲ್ಲಿ ಸೋತಾಗ ಪಕ್ಷ ನನ್ನನ್ನು ರೇಷ್ಣೆ ಮಂಡಳಿ ಅಧ್ಯಕ್ಷನನ್ನಾಗಿ ಮಾಡಿತು. ಕನಕಪುರ ಉಪಚುನಾವಣೆಯಲ್ಲಿ ದೇವೇಗೌಡರ ವಿರುದ್ಧ ಸ್ಪರ್ಧೆ ಮಾಡುವಂತೆ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿ ಎರಡು ಭಾಗಗಳಾಗಿ ಒಡೆದಾಗ, ಮಂತ್ರಿ ಸ್ಥಾನ ಬಿಟ್ಟು ಪಕ್ಷದ ಜವಾಬ್ದಾರಿ ವಹಿಸಿಕೊಂಡೆ. ಮತ್ತೊಮ್ಮೆ ನಾನು ಸೋತಾಗ ಪಕ್ಷ ನನ್ನನ್ನು ಎಂಎಲ್‌ಸಿ ಮಾಡಿ ವಿಪಕ್ಷ ನಾಯಕನನ್ನಾಗಿ ಮಾಡಿತು. ಆತುರ ನಿರ್ಧಾರದಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಬಹುದು. ಯಾವ ತಾಯಿ ನಮ್ಮನ್ನುಸಾಕಿ ಸಲಹಿದ್ದಾಳೆ. ಅವಳಿಗೆ ದ್ರೋಹ ಬಗೆಯಬಾರದು ಎಂದು ಈಶ್ವರಪ್ಪ ಹೇಳಿದ್ದಾರೆ.
ಎಲ್‌ಕೆ ಅಡ್ವಾಣಿ , ಮುರುಳಿ ಮನೋಹರ್ ಜೋಶಿ ಅವರಿಗಿಂತ ನಾನು ದೊಡ್ಡವನೇ? ನನಗೂ ನೋವಾಗುತ್ತದೆ. ಆದರೆ ಪಕ್ಷ ತೆಗೆದುಕೊಂಡ ತೀರ್ಮಾನ. ಯಾವ ಸ್ಥಾನಕ್ಕೆ ಪರಿಗಣನೆಗೆ ತೆಗೆದುಕೊಳ್ಳಬೇಡಿ ಎಂದು ಕೋರಿದ್ದಾರೆ. ರಾಜೀನಾಮೆ ನೀಡಿಲ್ಲ ಎಂದಿದ್ದಾರೆ. ಇದೇ ವೇಳೆ ಜಗದೀಶ್ ಶೆಟ್ಟರ್ ಪಕ್ಷೇತರರಾಗಿ ನಿಲ್ಲುವ ಹೇಳಿಕೆ ನೀಡುವುದು ಸರಿಯಲ್ಲ. ಶೆಟ್ಟರ್ ಅವರನ್ನು ಪಕ್ಷ ಮುಖ್ಯಮಂತ್ರಿಯಾಗಿ ಮಾಡಿದೆ. ಶೆಟ್ಟರ್ ಪಕ್ಷದ ಜೊತೆ ನಿಲ್ಲಬೇಕು ಎಂದು ಸಲಹೆ ನೀಡಿದ್ದಾರೆ. ಕಾರ್ಯಕರ್ತರು ಎಷ್ಟೇ ಒತ್ತಡ ಹೇರಿದರೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!