ಹೊಸದಿಗಂತ ವರದಿ, ಶಿರಸಿ:
ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳನ್ನು ಬೆಸೆಯುವ, ದಶಕಗಳ ಕನಸಾದ ತಾಳಗುಪ್ಪ-ಹೊನ್ನಾವರ ಮತ್ತು ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೆ ಸಂಪರ್ಕ ಯೋಜನೆಗೆ ಇದೀಗ ಮರುಜೀವ ಬಂದಿದೆ. 2025ರ ಮಾರ್ಚ್ 19ರಂದು ಅಂತಿಮ ಹಂತದ ಸಮೀಕ್ಷೆಗಾಗಿ ಭಾರತೀಯ ರೈಲ್ವೆ ಇಲಾಖೆ 23.90 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ. ಈ ಬೆಳವಣಿಗೆ, ಈ ಭಾಗದ ಜನರ ಬಹುದಿನಗಳ ಕನಸು ನನಸಾಗುವ ಭರವಸೆಯನ್ನು ಮೂಡಿಸಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ತಾಳಗುಪ್ಪ-ಹೊನ್ನಾವರ ಮತ್ತು ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೆ ಮಾರ್ಗದ ಕಲ್ಪನೆಯು ಹಲವು ದಶಕಗಳಷ್ಟು ಹಳೆಯದು. ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಈ ಯೋಜನೆ, ಮಲೆನಾಡು ಮತ್ತು ಕರಾವಳಿ ಪ್ರದೇಶಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಪ್ರವಾಸೋದ್ಯಮ, ವ್ಯಾಪಾರ ಮತ್ತು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಈ ಯೋಜನೆ ಹೊಂದಿದೆ. ಈ ಯೋಜನೆಯು ಕೇವಲ ಪ್ರಯಾಣಿಕರ ಅನುಕೂಲಕ್ಕೆ ಮಾತ್ರವಲ್ಲ, ಪ್ರಾದೇಶಿಕ ಆರ್ಥಿಕತೆಗೆ ಉತ್ತೇಜನ ನೀಡುತ್ತದೆ. ಕೃಷಿ, ವ್ಯಾಪಾರ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದಿದ್ದಾರೆ.
ಈಗಾಗಲೇ ಪ್ರಾಥಮಿಕ ಹಂತದ ಸಮೀಕ್ಷೆ ಪೂರ್ಣಗೊಂಡಿದ್ದು, ಅದರಸಾಧಕ-ಬಾಧಕಗಳ ವಿಶ್ಲೇಷಣೆ ನಡೆದಿದೆ.ಅಂತಿಮ ಹಂತದ ಸಮೀಕ್ಷೆಗೆ 23.90 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಲಾಗಿದೆ.ಸಮೀಕ್ಷೆಯು ಮಾರ್ಗದ ನಿಖರವಾದ ಮಾರ್ಗ, ಭೂಪ್ರದೇಶದ ವಿಶ್ಲೇಷಣೆ, ಪರಿಸರ ಪ್ರಭಾವದ ಮೌಲ್ಯಮಾಪನ ಮತ್ತು ಆರ್ಥಿಕ ಕಾರ್ಯಸಾಧ್ಯತೆಯ ಅಧ್ಯಯನವನ್ನು ಒಳಗೊಂಡಿರುತ್ತದೆ.ಸಮೀಕ್ಷೆಯ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗುವುದು, ನಂತರ ಯೋಜನೆಯ ಅನುಷ್ಠಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು.ತಾಳಗುಪ್ಪ-ಹೊನ್ನಾವರ ಮತ್ತು ಶಿವಮೊಗ್ಗ-ಶೃಂಗೇರಿ-ಮಂಗಳೂರು ರೈಲ್ವೆ ಸಂಪರ್ಕ ಯೋಜನೆಯು ಈ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ, ರೈಲ್ವೆ ಇಲಾಖೆ ಮತ್ತು ಸ್ಥಳೀಯ ಸಮುದಾಯದ ಸಹಕಾರ ಅತ್ಯಗತ್ಯ ಎಂದು ಕಾಗೇರಿ ಹೇಳಿದ್ದಾರೆ.
ಅಂತಿಮ ಸಮೀಕ್ಷೆ
ತಾಳಗುಪ್ಪ ಹುಬ್ಬಳ್ಳಿ ಈಗಾಗಲೇ ಅಂತಿಮ ಹಂತದ ಸರ್ವೆಗೆ ಅಧಿಸೂಚನೆ ಹೊರಡಿಸಿ ಕಾರ್ಯ ತತ್ಪರವಾಗಿದ್ದು ಶೀಘೃದಲ್ಲಿ ವರದಿಯನ್ನು ರೈಲ್ವೆ ಬೋರ್ಡ್ ಗೆ ಸಲ್ಲಿಸಲು ಈಗಾಗಲೇ ಆದೇಶ ನೀಡಿದ್ದು ಸಹ ಇರುತ್ತದೆ. ಇದರಿಂದ ನಮ್ಮ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಸಹಾಯಕವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರು ಹೇಳಿದ್ದಾರೆ.