ಹೊಸದಿಗಂತ ವರದಿ, ಶಿರಸಿ:
ದೇಶದಲ್ಲಿ ಕಾಳುಮೆಣಸಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಶಿರಸಿ ಮಾರುಕಟ್ಟೆಯ ದರವನ್ನು ಸ್ಪೈಸ್ ಬೋರ್ಡ್‌ನ ದರಪಟ್ಟಿಯಲ್ಲಿ ದಾಖಲಿಸಲು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಒಪ್ಪಿಗೆ ಸೂಚಿಸಿದ್ದಾರೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನವಿಗೆ ಸ್ಪಂದಿಸಿದ ಸಚಿವರು, ಶಿರಸಿ ಮಾರುಕಟ್ಟೆಯ ಪ್ರಾಮುಖ್ಯತೆಯನ್ನು ಗುರುತಿಸಿ ಈ ಕ್ರಮ ಕೈಗೊಂಡಿದ್ದಾರೆ.
ಉತ್ತರ ಕನ್ನಡದ ಪ್ರಮುಖ ವ್ಯಾಪಾರ ಕೇಂದ್ರವಾದ ಶಿರಸಿಯಲ್ಲಿನ ಕಪ್ಪು ಬಂಗಾರದ ಬೆಲೆ, ಇನ್ನು ಮುಂದೆ ಸ್ಪೈಸ್ ಬೋರ್ಡ್‌ನ ದಿನನಿತ್ಯದ ದರಪಟ್ಟಿಯಲ್ಲಿ ನಮೂದಾಗಲಿದೆ. ಈ ಮೂಲಕ, ಶಿರಸಿ ಮಾರುಕಟ್ಟೆಯು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಲಿದೆ.
ಇತ್ತೀಚೆಗೆ ಶಿರಸಿಯ ಕದಂಬ ಮಾರ್ಕೆಟಿಂಗ್‌ನಲ್ಲಿ ನಡೆದ ಕಾಳುಮೆಣಸಿನ ಹಬ್ಬದಲ್ಲಿಯೂ ಈ ಕುರಿತು ಬೇಡಿಕೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ, ಸಂಸದ ಕಾಗೇರಿ ಅವರು ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿ, ಶಿರಸಿ ಮಾರುಕಟ್ಟೆಯ ದರವನ್ನು ಸ್ಪೈಸ್ ಬೋರ್ಡ್‌ನ ದರಪಟ್ಟಿಯಲ್ಲಿ ನಮೂದಿಸುವಂತೆ ಆಗ್ರಹಿಸಿದ್ದರು.
ಈ ನಿರ್ಧಾರದಿಂದ, ಶಿರಸಿ ಹಾಗೂ ಸುತ್ತಮುತ್ತಲ ಪ್ರದೇಶದ ಕಾಳುಮೆಣಸು ಬೆಳೆಗಾರರಿಗೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ಬೆಲೆಗಳ ಪಾರದರ್ಶಕತೆ ಹೆಚ್ಚುವುದರ ಜೊತೆಗೆ, ಮಾರುಕಟ್ಟೆಯ ಸ್ಪರ್ಧಾತ್ಮಕತೆಗೂ ಇದು ಸಹಕಾರಿಯಾಗಲಿದೆ.