ಹೊಸದಿಗಂತ ಡಿಜಿಟಲ್ ಡೆಸ್ಕ್
2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ಅಮಾಯಕರನ್ನು ಬಂಧಿಸಲು ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಪ್ರಕರಣದಲ್ಲಿ ಇತ್ತೀಚೆಗೆ ಗುಜರಾತ್ ಪೊಲೀಸರಿಂದ ಬಂಧಿಸಲ್ಪಟ್ಟ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಗೆ ನೀಡಲಾಗಿರುವ ‘ಪದ್ಮಶ್ರೀ’ ಪ್ರಶಸ್ತಿಯನ್ನು ಹಿಂಪಡೆಯುವಂತೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಮಂಗಳವಾರ ಒತ್ತಾಯಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತೆಯೆಂದು ಗುರುತಿಸಿಕೊಂಡಿರುವ ತೀಸ್ತಾಗೆ ಕೇಂದ್ರ ಸರ್ಕಾರವು 2007 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದು ವಿವಿಧ ಕ್ಷೇತ್ರಗಳಲ್ಲಿ ಜನರ ಕೊಡುಗೆಯನ್ನು ಗುರುತಿಸಲು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, ಹಿಂದಿನ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗಾಗಿ ಸೆಟಲ್ವಾಡ್ ಅವರಿಗೆ ಪ್ರಶಸ್ತಿ ನೀಡಿದೆ ಎಂದು ಆರೋಪಿಸಿದರು.
“ಅವರು ‘ಅವಾರ್ಡ್ ವಾಪ್ಸಿ’ ಗ್ಯಾಂಗ್ (ಪ್ರಶಸ್ತಿಗಳನ್ನು ಹಿಂದಿರುಗಿಸುವುದಾಗಿ ಬೆದರಿಕೆ ಹಾಕುವವರು) ಸದಸ್ಯೆಯಾಗಿದ್ದಳು. ತೀಸ್ತಾ ಜಾವೇದ್ ಸೆಟಲ್ವಾಡ್ ಅವರಂತಹ ವ್ಯಕ್ತಿಗಳಿಂದ ಪ್ರಶಸ್ತಿಯನ್ನು ಹಿಂಪಡೆಯಬೇಕು, ಅಂತಹ ಜನರ ನಡವಳಿಕೆಯು ಪ್ರಶ್ನಾರ್ಹವಾಗಿದೆ ಮತ್ತು ಅತ್ಯಂತ ಗಂಬೀರ ಪ್ರಕರನದಲ್ಲಿ ಆಕೆಯ ಬಂಧನವಾಗಿದೆ, ”ಎಂದು ರಾಜ್ಯ ಸರ್ಕಾರದ ವಕ್ತಾರರೂ ಆಗಿರುವ ಸಚಿವರು ಹೇಳಿದರು.
ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಶನಿವಾರ ಸೆಟಲ್ವಾಡ್ ಅವರನ್ನು ಮುಂಬೈನ ಮನೆಯಿಂದ ಬಂಧಿಸಿ ಕರೆತಂದಿತ್ತು. ನಂತರ ಆಕೆಯನ್ನು ಅಹಮದಾಬಾದ್‌ಗೆ ಕರೆದೊಯ್ದು ಅಲ್ಲಿನ ಅಪರಾಧ ವಿಭಾಗಕ್ಕೆ ಒಪ್ಪಿಸಲಾಯಿತು.
ಗುಜರಾತ್ ಗಲಭೆ ಕುರಿತಾಗಿ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಪ್ರಕರಣದಲ್ಲಿ ಅಹಮದಾಬಾದ್‌ನ ನ್ಯಾಯಾಲಯವು ಭಾನುವಾರ ಸೆಟಲ್ವಾಡ್ ಅವರನ್ನು ಜುಲೈ 2 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
2002ರ ಗೋಧ್ರಾ ನಂತರದ ಗಲಭೆ ಪ್ರಕರಣಗಳಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನೀಡಿದ್ದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ