ಆರ್ ಬಿ ಶ್ರೀಕುಮಾರ್- ಗುಜರಾತ್ ಗಲಭೆ ಪ್ರಕರಣದಲ್ಲಿ ಮೋದಿ ವಿರುದ್ಧ ಸಂಚು ಮಾಡಿದಾತ ಇಸ್ರೊ ವಿಜ್ಞಾನಿ ವಿರುದ್ಧವೂ ಪಿತೂರಿಗೈದಿದ್ದ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
2002ರಲ್ಲಿ ನಡೆದ ಗುಜರಾತ್‌ ಗಲಭೆಯಲ್ಲಿ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿ ಹಾಗೂ ಸರ್ಕಾರದ ಪಾತ್ರವಿದೆ ಎಂದು ಕಟ್ಟು ಕಥೆ ಕಟ್ಟಿ ಸಂಚು ನಡೆಸುತ್ತಿದ್ದವರ ಮುಖವಾಡಗಳು ಒಂದೊಂದಾಗಿ ಕಳಚಿ ಬೀಳುತ್ತಿವೆ. ನಕಲಿ ಮಾನವತಾವಾದಿ ತೀಸ್ತಾ ಸೆಟಲ್ವಾಡ್‌ ನಂತರ ಈಗ ಮಾಜಿ ಪೋಲೀಸ್‌ ಮಹಾನಿರ್ದೇಶಕ ಆರ್‌.ಬಿ. ಶ್ರೀಕುಮಾರ್‌ ಮೇಲೆ ತೂಗುಗತ್ತಿ ತೂಗುತ್ತಿದೆ.

ಗುಜರಾತ್‌ ಗಲಭೆಯಲ್ಲಿ ನರೇಂದ್ರ ಮೋದಿಯವರ ಕುಮ್ಮಕ್ಕಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರದಲ್ಲಿ ಆರ್‌. ಬಿ. ಶ್ರೀಕುಮಾರ್‌ ಪಾತ್ರವೇನು ಎಂಬುದನ್ನು ಸುಪ್ರಿಂ ಕೋರ್ಟ್‌ ಪ್ರಶ್ನಿಸಿದೆ. ಅಲ್ಲದೇ ಗಲಭೆಯಲ್ಲಿ ಅಂದಿನ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿರುವುದು ʼದುರುದ್ದೇಶʼಪೂರಿತವಾಗಿದೆ ಎಂದು ಕೋರ್ಟ್‌ ಉಲ್ಲೇಖಿಸಿರುವುದು ಇಲ್ಲಿ ಗಮನಾರ್ಹ. ಈ ಸಂಬಂಧ ಗಲಭೆಯ ವಿಚಾರವಾಗಿ ಅಮಾಯಕರ ಮೇಲೆ ಸುಳ್ಳು ಕೇಸ್‌ ಹಾಕಿ ಬಂಧಿಸಿರುವ ಕುರಿತು ಜೂ.25 ರಂದು ಶ್ರೀಕುಮಾರರನ್ನು ಅಹಮದಾಬಾದ್‌ ಪೋಲೀಸರು ಬಂಧಿಸಿದ್ದಾರೆ.

ಒಂದರ್ಥದಲ್ಲಿ ನೋಡುವುದಾದರೆ ತೀಸ್ತಾಳಿಗಿಂತ ಶ್ರೀಕುಮಾರ್‌ ತೀರಾ ಭಿನ್ನರೇನಲ್ಲ. ಇಬ್ಬರ ಉದ್ದೇಶವೂ ಒಂದೇ ಆದರೆ ಹಿನ್ನೆಲೆ ಬೇರೆ ಬೇರೆಯಷ್ಟೇ. ತಮ್ಮ ದುರುದ್ದೇಶಗಳಿಗೆ ತಮ್ಮ ಕೈಲಿರುವ ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಶ್ರೀಕುಮಾರ್‌ ತಮ್ಮ ವಿರೋಧಿಗಳನ್ನು ಹಣಿಯಲು ಬಳಸಿದರು. ಅಂದಿನ ಯುಪಿಎ ಸರ್ಕಾರದ (ಕೃಪೆ?) ಅವಧಿಯಲ್ಲಿ ಮುಚ್ಚಿಹೋಗಿದ್ದ ಅವರ ಮೇಲಿನ ಪ್ರಕರಣಗಳು, ವಿವಾದಗಳೆಲ್ಲ ಈಗ ಹೊರಬರುತ್ತಿವೆ. 1986ರಲ್ಲೇ ʼಲಾಕಪ್‌ ಡೆತ್‌ʼ ಆರೋಪ ಅವರ ಮೇಲೆ ಕೇಳಿಬಂದರೂ ಅದು ಹೇಗೊ ಪ್ರಕರಣ ಅಲ್ಲಿಯೇ ಮುಚ್ಚಿ ಹೋಗಿತ್ತು. ಶ್ರೀಕುಮಾರ್‌ ಆರೋಪ ಮುಕ್ತರಾಗಿದ್ದರು. ಅಲ್ಲಿಂದ 1987ರಲ್ಲಿ ಅವರನ್ನು ಗುಪ್ತಚರ ವಿಭಾಗಕ್ಕೆ ನೇಮಿಸಲಾಯಿತು.

1994ರಲ್ಲಿ ಕೇರಳ ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಶ್ರೀಕುಮಾರ್‌ ಬೇಹುಗಾರಿಕೆ ಆರೋಪದ ಮೇಲೆ ವಿಜ್ಞಾನಿ ನಂಬಿ ನಾರಾಯಣನ್ ರನ್ನು ಬಂಧಿಸಿದ್ದರು. ಅವರು ಭಾರತೀಯ ರಾಕೆಟ್‌ ಟೆಕ್ನಾಲಜಿಯನ್ನು ಬೇರೆ ದೇಶಕ್ಕೆ ಮಾರುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಥರ್ಡ್‌ ಗ್ರೇಡ್‌ ಶಿಕ್ಷೆ ಕೊಡಲಾಗಿತ್ತು. ಮಾಲ್ಡೀವ್ಸ್‌ ನ ಮಹಿಳೆಯರಿಬ್ಬರು ವಿಷಕನ್ಯೆಯರಾಗಿ ನಂಬಿನಾರಾಯಣನ್‌ ಅವರನ್ನು ತಮ್ಮ ಬಲೆಯಲ್ಲಿ ಬೀಳಿಸಿಕೊಂಡು ಅವರಿಂದ ರಾಕೆಟ್‌ ಟೆಕ್ನಾಲಜಿಯನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿತ್ತು. ಭಾರತದ ಪ್ರಖ್ಯಾತ ವಿಜ್ಞಾನಿಯನ್ನು ಅರೆಸ್ಟ್‌ ಮಾಡಿದ್ದ ಶ್ರೀಕುಮಾರ್‌ ಅವರನ್ನು ಚಿತ್ರಹಿಂಸೆಗೊಳಪಡಿಸಿದ್ದರು ಎನ್ನಲಾಗಿದೆ. ಕೊನೆಗೆ ಈ ಕೇಸ್‌ ಸಿಬಿಐ ಗೆ ವರ್ಗಾವಣೆಯಾಗಿತ್ತು. ವಿಚಾರಣೆ ನಡೆಸಿದ ಸಿಬಿಐ ಅವರ ಮೇಲಿನ ಸುಳ್ಳು ಆರೋಪಗಳನ್ನು ತೆಗೆದು ಹಾಕಿತ್ತು. ಅವರಿಗೆ 50 ಲಕ್ಷ ಪರಿಹಾರವನ್ನು ಕೇರಳ ಸರ್ಕಾರ ನೀಡಬೇಕು ಎಂದು ಕೋರ್ಟ್‌ ಆದೇಶ ನೀಡಿತ್ತು. ಇಸ್ರೋದ ಕ್ರಯೋಜನಿಕ್‌ ಇಂಜಿನ್‌ ವಿಜ್ಞಾನಿಯಾಗಿದ್ದ ನಂಬಿ ನಾರಾಯಣನ್‌ ಆರೋಪ ಮುಕ್ತರೇನೋ ಆಗಿದ್ದರು ಆದರೆ ಇದು ಕ್ರಯೋಜನಿಕ್‌ ಇಂಜಿನ್‌ ನ ಅನ್ವೇಷಣೆಯಲ್ಲಿ ಭಾರತವು 20 ವರ್ಷಗಳಷ್ಟು ಹಿಂದೆ ಹೋಗುವಂತೆ ಮಾಡಿತ್ತು.

ಈ ಘಟನೆಯ ಬಗ್ಗೆ ನಂಬಿ ನಾರಾಯಣನ್‌ ಬೇರೆಯದೇ ಹಿನ್ನೆಲೆಯನ್ನು ಹೇಳುತ್ತಾರೆ. ನಂಬಿ ನಾರಾಯಣರನ್ನು ಶ್ರೀಕುಮಾರ್ ಬಂಧಿಸುವಲ್ಲಿ ಬೇರೆಯದೇ ಕಾರಣವಿದೆ, ತಮ್ಮ ಸಂಬಂಧಿಯೊಬ್ಬರಿಗೆ ಇಸ್ರೋದಲ್ಲಿ ಕೆಲಸ ಕೊಡಿಸುವಂತೆ ಶ್ರೀಕುಮಾರ್‌ ನಂಬಿಯವರ ಬಳಿ ಬೇಡಿಕೆಯಿಟ್ಟಿದ್ದರು, ಆದರೆ ನಂಬಿ ಇದನ್ನು ತಿರಸ್ಕರಿಸಿದ್ದರು. ಈ ಕಾರಣಕ್ಕಾಗಿಯೇ ತನ್ನ ಮೇಲೆ ಆರೋಪ ಹೊರಿಸಿರಬಹದು ಎಂದು ಸಿಬಿಐ ತನಿಖೆಯಲ್ಲಿ ನಂಬಿ ನಾರಾಯಣ್‌ ಘಟನೆಯ ಹಿನ್ನೆಲೆಯನ್ನು ವಿವರಿಸಿದ್ದರು.

ಪ್ರಸ್ತುತ ಚರ್ಚೆಯಲ್ಲಿರುವ ಗುಜರಾತ್‌ ಗಲಭೆಯ ಪ್ರಕರಣದಲ್ಲೂ ಸರ್ಕಾರವನ್ನೂ ದೂಷಿಸಲು ಸುಳ್ಳು ಆರೋಪ, ಸುಳ್ಳು ಸಾಕ್ಷಿಗಳ ಸೃಷ್ಟಿ ಆರೋಪಗಳ ಮೇಲೆ ಶ್ರೀಕುಮಾರ್‌ ಅವರನ್ನು ಬಂಧಿಸಲಾಗಿದೆ. ಹೀಗೆ ಗೋಧ್ರಾ ಗಲಭೆಯನ್ನು ಕುತಂತ್ರದಿಂದ ಮೋದಿ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸಿದವರ ನಿಜರೂಪ ಬಯಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!