February 7, 2026
Saturday, February 7, 2026
spot_img

ಬಿಹಾರದಲ್ಲಿ ಸಂಸದ ಪಪ್ಪು ಯಾದವ್ ಬಂಧನ: ಇದು ರಾಜಕೀಯ ದ್ವೇಷದ ಕೃತ್ಯ ಎಂದ ರಾಹುಲ್ ಗಾಂಧಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದಲ್ಲಿ ಸಂಸದ ಪಪ್ಪು ಯಾದವ್ ಬಂಧನ: ಇದು ರಾಜಕೀಯ ದ್ವೇಷದ ಕೃತ್ಯ ಎಂದ ರಾಹುಲ್ ಗಾಂಧಿ!
1995ರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದಲ್ಲಿ ಪಪ್ಪು ಯಾದವ್​ ಎಂದು ಜನಪ್ರಿಯವಾಗಿರುವ ಸಂಸದ ರಾಜೇಶ್​ ರಂಜನ್​ ಅವರನ್ನು ಪೊಲೀಸರು ಅವರ ನಿವಾಸದಲ್ಲಿ ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ.

ನಂತರ ಆರೋಗ್ಯ ಸಮಸ್ಯೆಗಳ ಕಾರಣ ಅವರನ್ನು ಶನಿವಾರ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಎಚ್) ದಾಖಲಿಸಲಾಗಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 467ರ ಅಡಿ ದಾಖಲಾಗಿರುವ ಪ್ರಕರಣದಲ್ಲಿ ಎಂಪಿ/ಎಂಎಲ್​ಎ ನ್ಯಾಯಾಲಯ ಹೊರಡಿಸಿದ ವಾರಂಟ್ ಅನ್ವಯ ಪೊಲೀಸರು ಅವರನ್ನು ಬಂಧಿಸಿದರು.

1995ರಲ್ಲಿ ಪಪ್ಪು ಯಾದವ್ ಮನೆಯನ್ನು ವೈಯಕ್ತಿಕ ಬಳಕೆಗಾಗಿ ಎಂದು ಬಾಡಿಗೆಗೆ ಪಡೆದು, ಬಳಿಕ ಅದನ್ನು ರಾಜಕೀಯ ಕಚೇರಿಯನ್ನಾಗಿ ಪರಿವರ್ತಿಸಿದ್ದರು ಎಂದು ಆರೋಪಿಸಿ ಮನೆ ಮಾಲೀಕರಾದ ವಿನೋದ್ ಬಿಹಾರಿ ಲಾಲ್, ಪಾಟ್ನಾದ ಗರ್ದಾನಿಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ವಂಚನೆ, ನಕಲಿ ದಾಖಲೆ, ಅತಿಕ್ರಮಣ, ಕ್ರಿಮಿನಲ್ ಬೆದರಿಕೆ ಮತ್ತು ಪಿತೂರಿ ಆರೋಪಗಳನ್ನು ಮಾಡಲಾಗಿತ್ತು. ಹಳೆಯ ಐಪಿಸಿಯ ಸೆಕ್ಷನ್ 419, 420, 468, 448, 506 ಮತ್ತು 120 ಬಿ ಅಡಿಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣವು ಪಾಟ್ನಾದ ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿತ್ತು. ಪಪ್ಪು ಯಾದವ್ ಪದೇ ಪದೆ ವಿಚಾರಣೆಗೆ ಹಾಜರಾಗಲು ವಿಫಲರಾದ ಕಾರಣ ನ್ಯಾಯಾಲಯವು ಬಂಧನ ವಾರಂಟ್ ಹೊರಡಿಸಿತ್ತು. ಎರಡು ದಿನಗಳ ಹಿಂದೆ, ನ್ಯಾಯಾಲಯವು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸಿತ್ತು. ಇದರ ಅನುಸಾರ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ರಾಹುಲ್ ಗಾಂಧಿ ಆಕ್ರೋಶ
ಇತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ , ಪಪ್ಪು ಯಾದವ್‌ಗೆ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಪಾಟ್ನಾದಲ್ಲಿ ನೀಟ್ ಆಕಾಂಕ್ಷಿಯೊಬ್ಬ ನಿಗೂಢವಾಗಿ ಸಾವನ್ನಪ್ಪಿದ್ದು, ರಾಜ್ಯ ಸರ್ಕಾರದ ನ್ಯೂನತೆಗಳನ್ನು ಯಾದವ್ ಬಹಿರಂಗಪಡಿಸಿದ್ದಾರೆ. ವಿದ್ಯಾರ್ಥಿನಿ ಕುಟುಂಬ ನ್ಯಾಯಯುತ ತನಿಖೆ ಕೋರಿದಾಗ, ಬಿಜೆಪಿ-ಎನ್‌ಡಿಎ ಅದೇ ಹಳೆಯ ನಾಟಕ ಶುರು ಮಾಡಿದ್ದು, ಪ್ರಕರಣವನ್ನು ಹಳಿತಪ್ಪಿಸಲಾಗುತ್ತಿದೆ ಮತ್ತು ಅಪರಾಧಿಗಳನ್ನು ರಕ್ಷಿಸಲಾಗುತ್ತಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂದು ಅವರ ಬಂಧನವು ಸ್ಪಷ್ಟವಾಗಿ ರಾಜಕೀಯ ದ್ವೇಷದ ಕೃತ್ಯವಾಗಿದ್ದು, ಪ್ರಶ್ನಿಸುವ ಪ್ರತಿಯೊಂದು ಧ್ವನಿಯನ್ನು ಅಡಗಿಸುವ ಗುರಿ ಹೊಂದಿದೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !