ಸಿನಿಮಾ ಜಗತ್ತಿನಲ್ಲಿ ಎಂ.ಎಸ್.ಧೋನಿ: ‘ಲೆಟ್ಸ್ ಗೆಟ್ ಮ್ಯಾರೀಡ್’ ಟ್ರೈಲರ್ ಅನಾವರಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕ್ರಿಕೆಟ್ ಜಗತ್ತಿನ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ (M.s Dhoni) ಇದೀಗ ಸಿನಿಮಾ ಜಗತ್ತಿಗೂ ಎಂಟ್ರಿ ಕೊಟ್ಟಿದ್ದು, ತಮ್ಮದೇ ಧೋನಿ ಎಂಟರ್‌ಟೈನ್ಮೆಂಟ್ ನಿರ್ಮಾಣ ಸಂಸ್ಥೆ (Production) ಮೂಲಕ ಧೋನಿ ಪತ್ನಿ ಸಾಕ್ಷಿ ‘ಲೆಟ್ಸ್ ಗೆಟ್ ಮ್ಯಾರೀಡ್’ (Lets Get Married) ಎಂಬ ತಮಿಳು ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಚೆನ್ನೈನಲ್ಲಿ ಈ ಚಿತ್ರದ ಟ್ರೈಲರ್, ಆಡಿಯೋ ಬಿಡುಗಡೆ ಕಾರ್ಯಕ್ರಮ ನೆರವೇರಿದೆ. ಕ್ಯಾಪ್ಟನ್ ಕೂಲ್ ತಮ್ಮದೇ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾದ ಟ್ರೈಲರ್ ಅನಾವರಣ ಮಾಡಿ ಹಲವು ವಿಷಯಗಳನ್ನು ಹಂಚಿಕೊಂಡರು.

ನಾನು ಈ ಸಿನಿಮಾವನ್ನು ನೋಡಿದ್ದೇನೆ. ಸಿನಿಮಾದಲ್ಲಿ ತುಂಬಾ ಮನರಂಜನೆಯಿದೆ. ನಾನು ನನ್ನ ಮಗಳ ಜೊತೆ ಈ ಸಿನಿಮಾ ನೋಡಬಹುದು. ಅವಳು ತುಂಬಾ ಪ್ರಶ್ನೆಗಳನ್ನು ಕೇಳುತ್ತಾಳೆ. ಇಡೀ ಚಿತ್ರತಂಡ ಅದ್ಭುತ ಕೆಲಸ ಮಾಡಿದೆ. ಈ ಪ್ರಾಜೆಕ್ಟ್ ಅನ್ನು ಅವರು ನಿಭಾಯಿಸಿದ ರೀತಿ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನ ಹೆಂಡತಿಗೆ ಸಿನಿಮಾ ಮಾಡಬೇಕು ಎಂದಾಗ ನಾನು ಹೇಳಿದ್ದು ಒಂದೇ, ಸಿನಿಮಾ ಮಾಡುವುದೆಂದರೆ ಮನೆ ವಿನ್ಯಾಸ ಮಾಡಿದಂತೆ ಅಲ್ಲ. ನೀವು ಗೋಡೆಗೆ ಬಣ್ಣ ಹಾಕುತ್ತೀರ. ನಿಮಗೆ ಇಷ್ಟವಿಲ್ಲ, ನೀವು ಬಣ್ಣವನ್ನು ಬದಲಾಯಿಸುತ್ತೀರಿ. ನಂತರ, ಮೊದಲ ಬಣ್ಣವು ಉತ್ತಮವಾಗಿದೆ ಎಂದು ನೀವು ಅರಿತುಕೊಳ್ಳುತ್ತೀರಿ. ನಂತರ ನೀವು ಅದನ್ನು ಮತ್ತೆ ಬಣ್ಣಿಸುತ್ತೀರಿ. ಸಿನಿಮಾಗಳಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾ ಸ್ವಲ್ಪ ದಿನಗಳಲ್ಲಿ ಥಿಯೇಟರ್‌ಗೆ ಬರಲಿದೆ. ಅತ್ತೆ ಸೊಸೆ- ಮಗನ ನಡುವೆ ನಡೆಯುವ ಕಥೆ ಎಂದರು.

ಸಾಕ್ಷಿ ಧೋನಿ (Sakshi Dhoni) ಮಾತನಾಡಿ, ನನ್ನ ಬಹಳಷ್ಟು ಸ್ನೇಹಿತರು ಮತ್ತು ನಮ್ಮ ಸುತ್ತಮುತ್ತಲಿನ ಪ್ರತಿಯೊಬ್ಬರೂ ಸಾಮಾನ್ಯವಾಗಿ ಜೀವನದಲ್ಲಿ ಇಂತಹ ಸನ್ನಿವೇಶಗಳನ್ನು ಎದುರಿಸಿದ್ದಾರೆ. ಹೀಗಾಗಿ ಇದನ್ನು ಚಲನಚಿತ್ರವಾಗಿ ಏಕೆ ಮಾಡಬಾರದು ಎಂದು ನಾವು ಯೋಚಿಸಿದ್ದೇವೆ. ಆದ್ದರಿಂದ ನಾವು ಮಾತನಾಡಿದ್ದೇವೆ. ಇದು ನಮ್ಮ ಮೊದಲ ಸಿನಿಮಾ ಆಗಿದ್ದರಿಂದ ತಮಿಳಿನಲ್ಲಿ ಮಾಡಲು ಬಯಸಿದ್ದೆವು ಎಂದರು.

ರಮೇಶ್ ತಮಿಳಮಣಿ ನಿರ್ದೇಶನದ ಈ ಚಿತ್ರದಲ್ಲಿ ಹರೀಶ್ ಕಲ್ಯಾಣ್ ಮತ್ತು ಇವಾನಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಕಾ ಫ್ಯಾಮಿಲಿ ಮನರಂಜನೆಯ ಚಿತ್ರವಾಗಿರುವ ‘ಲೆಟ್ಸ್ ಗೆಟ್ ಮ್ಯಾರೀಡ್’ ಆದಷ್ಟು ಬೇಗ ತೆರೆಗೆ ಬರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!