ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರೋಪಕಾರ, ಪರಧರ್ಮಕ್ಕೆ ಗೌರವ ಹಾಗೂ ಗುರುಗಳನ್ನು ಗೌರವಿಸುವುದನ್ನು ಎಲ್ಲ ಧರ್ಮಗಳೂ ಹೇಳಿವೆ. ಗುರು-ಹಿರಿಯರು ಹಾಗೂ ಹೆತ್ತವರನ್ನು ಗೌರವಿಸಿದರೆ ಪರಲೋಕದಲ್ಲೂ ಜಯ ಲಭಿಸುತ್ತದೆ ಎಂದು ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೋಡಿಜಾಲ್ ಇಬ್ರಾಹಿಂ ಹೇಳಿದ್ದಾರೆ.
ಉಳ್ಳಾಲ ತಾಲೂಕಿನ ಕುರ್ನಾಡು ಗ್ರಾಮದ ಮುಡಿಪು ಶ್ರೀ ಭಾರತೀ ಶಾಲೆಯ ಅಮೃತ ಮಹೋತ್ಸವ ಸಮಿತಿ ವತಿಯಿಂದ ಭಾನುವಾರ ನಡೆದ ‘ಅಕ್ಷರಾಮೃತವುಣಿಸಿ ಹರಸುವ ಶಿಕ್ಷಕರಿಗೆ ಕೋಟಿ ನಮನ’ ವಿಶಿಷ್ಟ ಗುರು ವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ ಮಾತನಾಡಿ, ಅಕ್ಷರ ಕಲಿಸಿದ ಗುರುಗಳನ್ನು ಗೌರವಿಸಿದರೆ ದೇವರ ಆಶೀರ್ವಾದ ಸದಾ ಇರುತ್ತದೆ. ಕಾರ್ಯನಿರತ ವ್ಯಕ್ತಿಗೆ ಕೆಲಸವೇ ವಿಶ್ರಾಂತಿ ಎಂಬ ವಿವೇಕಾನಂದರ ನುಡಿ ಶಿಕ್ಷಕ ವೃತ್ತಿಗೆ ಅನ್ವಯಿಸುತ್ತದೆ ಎಂದರು.
ಮುಡಿಪು ಸರ್ಕಾರಿ ಪ.ಪೂ.ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಪಿ.ಶೀನ ಶೆಟ್ಟಿ ದೀಪ ಬೆಳಗಿಸಿ, ವೇದಿಕೆಯಲ್ಲಿ ಅಳವಡಿಸಿದ್ದ ಗಂಟೆ ಬಾರಿಸಿ, ಹಾಜರಿ ಕರೆಯುವ ಮೂಲಕ ವಿಶಿಷ್ಟವಾಗಿ ಕಾರ್ಯಕ್ರಮ ಉದ್ಘಾಟಿಸಿದರು. ಚೆನ್ನೈಯ ಉಷಾ ಫೈರ್ ಸೇಫ್ಟಿ ಇಕ್ವಿಪ್ಮೆಂಟ್ ಲಿ.ನ ವ್ಯವಸ್ಥಾಪಕ ನಿರ್ದೇಶಕ, ಹಳೆ ವಿದ್ಯಾರ್ಥಿ ಜಗದೀಶ ಅಡಪ ಅಧ್ಯಕ್ಷತೆ ವಹಿಸಿದ್ದರು.
ಅತಿಥಿಗಳಾಗಿ ಮುಡಿಪು ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಡಿಸೋಜ, ನಾಟೆಕಲ್ ಅಲಿಫ್ ಸ್ಕೂಲ್ ಚೇರ್ಮನ್ ಎ.ಬಿ.ಮಹಮ್ಮದ್ ಹುಸೈನ್, ನಿವೃತ್ತ ಬ್ಯಾಂಕ್ ಅಧಿಕಾರಿ ಪರಮೇಶ್ವರ ಕಾರಂತ, ನೋವಿಗೋ ಸೊಲ್ಯೂಶನ್ ಸಹ ಸಂಸ್ಥಾಪಕ ಶಿಹಾಬ್ ಕಲಂದರ್ ಮುಡಿಪು, ಮುಡಿಪು ಆದ್ಯ ಟವರ್ಸ್ ಮಾಲೀಕ ವಿಕಾಸ್ ಎಂ. ಪಾಲ್ಗೊಂಡರು.
ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ವಿಜೇತ ಪಿ.ರಾಜೇಶ್, ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಜಯರಾಮ ಪೂಂಜ ತದ್ಮಬಾಳಿಕೆ ಅವರನ್ನು ಸನ್ಮಾನಿಸಲಾಯಿತು.
ಶಾಲೆಯಲ್ಲಿ ಸೇವೆ ಸಲ್ಲಿಸಿ ಗತಿಸಿದ 16 ಮಂದಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಶಾಲೆಯ ನಿವೃತ್ತ ಶಿಕ್ಷಕರು, ಪ್ರಸ್ತುತ ಶಿಕ್ಷಕರು, ಶಾಲೆಯಲ್ಲಿ ಕಲಿತು ಶಿಕ್ಷಕ ವೃತ್ತಿ ನಿರ್ವಹಿಸುತ್ತಿರುವ ಹಳೆ ವಿದ್ಯಾರ್ಥಿಗಳ ಸಹಿತ 60ಕ್ಕೂ ಅಧಿಕ ಮಂದಿಯನ್ನು ಸನ್ಮಾನಿಸಲಾಯಿತು.
ನಿವೃತ್ತರಾದವರ ಪೈಕಿ ಶ್ರೀಮತಿ ಸುಧಾ, ಶ್ರೀಮತಿ ಶಶಿಕಲಾ ಹಾಗೂ ರಾಮರಾವ್ ಇವರನ್ನು ಸನ್ಮಾನಿಸಲಾಯಿತು. ಪ್ರಸ್ತುತ ದುಡಿಯುತ್ತಿರುವ ಹಿರಿಯ ಶಿಕ್ಷಕರಾದ ರಾಮಕೃಷ್ಣ ಭಟ್ ಹಾಗೂ ವಿಜಯಲಕ್ಷ್ಮೀ ಟೀಚರ್ ಅವರನ್ನು ಸನ್ಮಾನಿಸಲಾಯಿತು.
ಸ್ಮರಣ ಸಂಚಿಕೆ ಪ್ರಧಾನ ಸಂಪಾದಕ ಚಂದ್ರಹಾಸ ಕಣಂತೂರು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ಅಮೃತ ಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಮೊಹಮ್ಮದ್ ಅಸ್ಗರ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಶೆಟ್ಟಿ, ಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್, ಶಕುಂತಳಾ ಶೆಟ್ಟಿ, ಸಂಚಾಲಕ ಸುಬ್ರಹ್ಮಣ್ಯ ಭಟ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶಂಕರನಾರಾಯಣ ಭಟ್, ಉಪಾಧ್ಯಕ್ಷ ನರಸಿಂಹ ಭಟ್, ಡಾ.ಅರುಣ್ ಪ್ರಸಾದ್ ಸಹಿತ ವಿವಿಧ ಪದಾಧಿಕಾರಿಗಳು ಹಾಜರಿದ್ದರು.
ವಿದ್ವತ್ ಶೆಟ್ಟಿ ಪ್ರಾರ್ಥಿಸಿದರು. ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಶ್ರೀ ಉಮೇಶ್ ಕೆ.ಆರ್. ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನರಸಿಂಹ ಭಟ್ ವಂದಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.