ನಿಜಕ್ಕೂ ಇದು ಭಾರತದ ಅಮೃತಕಾಲ, ಈ ಶತಮಾನ ನಮ್ಮದು ಎಂದ ಮುಕೇಶ್ ಅಂಬಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸ್ವಾತಂತ್ರ್ಯದ ಅಮೃತಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರೋ ಭಾರತವು ಜಗತ್ತಿನಲ್ಲಿ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ.‌ ಕೋವಿಡ್ ನಂತರ ಕಾಲಘಟ್ಟದಲ್ಲಿ ಜಗತ್ತಿನ ಇತರ ದೇಶಗಳು‌ ಆರ್ಥಿಕ‌ ಹಿಂಜರಿತದ ಭಯದಲ್ಲಿದ್ದರೆ ಭಾರತವು ವೇಗವಾಗಿ ಅಭಿವೃದ್ಧಿಯತ್ತ ಸಾಗುತ್ತಿದೆ. ಭಾರತದ ಈ ವೇಗದ ಬೆಳವಣಿಗೆಯು ವಿಶ್ವವೇ ಭಾರದತ್ತ ತಿರುಗುವಂತೆ ಮಾಡಿದ್ದು ಅನೇಕ ವಿಶ್ಲೇಷಣೆಗಳು ಕೆಲವೇ ವರ್ಷಗಳಲ್ಲಿ ಭಾರತವು ಅಭೂತಪೂರ್ವ ಅಭಿವೃದ್ಧಿ ಸಾಧಿಸಲಿದೆ ಎಂಬುದನ್ನು ತೆರೆದಿಟ್ಟಿವೆ. ರಿಲಯನ್ಸ್‌ ಮುಖ್ಯಸ್ಥ ಮುಕೇಶ್ ಅಂಬಾನಿಯವರೂ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.

ರಿಲಯನ್ಸ್ ಸಮೂಹದ ಕಾರ್ಯಕ್ರಮದಲ್ಲಿ ಮಾತನಾಡಿದ ಮುಕೇಶ್ ಅಂಬಾನಿ “ರಿಲಯನ್ಸ್ ಸಮೂಹವು ವಟ ವೃಕ್ಷದಂತೆ ವಿಶಾಲವಾಗಿ ಬೆಳೆಯುತ್ತಿದೆ. ವಿಶ್ವ ದರ್ಜೆಯ ವ್ಯಾಪಾರದೊಂದಿಗೆ ರಿಲಯನ್ಸ್ ಹಲವಾರು ಕ್ಷೇತ್ರಗಳಲ್ಲಿ ತನ್ನ ಛಾಪು ಮೂಡಿಸಿದೆ. ಮುಂದಿನ ದಿನಗಳಲ್ಲಿಯೂ ವ್ಯಾಪಕವಾಗಿ ರಿಲಯನ್ಸ್‌ ಅಭಿವೃದ್ಧಿ ಹೊಂದುವುದರೊಂದಿಗೆ ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಲಿದೆ” ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತದ ಅಭಿವೃದ್ಧಿಯ ಕುರಿತೂ ಅವರು ಮಾತನಾಡಿದ್ದು, ಅವರ ಮಾತಿನ ಸಾರಾಂಶ ಹೀಗಿದೆ. “21ನೇಯ ಶತಮಾನ ಭಾರತದ್ದು ಎಂಬಂತೆ ಜಗತ್ತು ಭಾರತದ ಬೆಳವಣಿಗೆಯನ್ನು ನೋಡುತ್ತಿದೆ. ಪ್ರಧಾನಿ ಮೋದಿಯವರು ಹೇಳಿದಂತೆ ಇದು ನಿಜವಾಗಿಯೂ ಭಾರತದ ಪಾಲಿಗೆ ಅಮೃತಕಾಲ. ಮುಂದಿನ 25 ವರ್ಷಗಳಲ್ಲಿ ಭಾರತವು ತನ್ನ 5 ಸಾವಿರ ವರ್ಷಗಳ ಇತಿಹಾಸದಲ್ಲಿಯೇ ಅಭೂತಪೂರ್ವವಾಗಿ ಪರಿವರ್ತನೆಯಾಗಲಿದೆ. ಭಾರತದಲ್ಲಿನ ಯುವಕರ ಹಾಗೂ ವಯಸ್ಕರ ಸಂಖ್ಯೆಯು ದೇಶದ ಪಾಲಿಗೆ ವರವಾಗಿ ಪರಿಣಮಿಸಿದ್ದು 2047ರ ಹೊತ್ತಿಗೆ ಭಾರತವು 40 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. ಈ ಕಾಲದಲ್ಲಿ ಕಡುಬಡತನದ ಯುಗದಿಂದ ಭಾರತವು ಸಮೃದ್ಧಿಯ ಯುಗವನ್ನು ಪ್ರವೇಶಿಸಲಿದೆ. ಜಗತ್ತಿನ ಹಲವೆಡೆ ಅನಿಶ್ಚಿತತೆಯನ್ನು ನಾವು ಕಾಣುತ್ತೇವೆ. ಆದರೆ ಭಾರತವನ್ನು ಶೈನಿಂಗ್ ಸ್ಪಾಟ್ ಎಂದು‌ ಪರಿಗಣಿಸಲಾಗಿದೆ. 1.4 ಬಿಲಿಯನ್ ಭಾರತೀಯರ ಬದುಕು ಊಹಿಸಲಾಗದ ಮಟ್ಟದಲ್ಲಿ ಸುಧಾರಣೆಯಾಗಲಿದೆ. ಪ್ರಜಾ ಪ್ರಭುತ್ವ ಮತ್ತು ಹೊಸ ತಂತ್ರಜ್ಞಾನ ಶಕ್ತಿಗಳಿಂದ ಭಾರತವು ಅಭಿವೃದ್ಧಿ ಹೊಂದಲಿದೆ” ಎಂದು ಅಂಬಾನಿ ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!