ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬಯಿ ಭಾರತದ ಶ್ರೀಮಂತ ನಗರವಾಗಿ ಮತ್ತೆ ಮೊದಲ ಸ್ಥಾನ ಗಳಿಸಿದೆ. ಎರಡನೇ ಸ್ಥಾನದಲ್ಲಿ ದೆಹಲಿ ಮತ್ತು ಹೈದರಾಬಾದ್ ಮೂರು ಸ್ಥಾನಗಳನ್ನು ಅಲಂಕರಿಸಿದೆ.ಇನ್ನು ಬೆಂಗಳೂರು ನಾಲ್ಕನೇ ಸ್ಥಾನಕ್ಕೆ ಇಳಿದಿದೆ.
ಭಾರತದ ಶ್ರೀಮಂತ ನಗರಗಳ ಪಟ್ಟಿಯನ್ನು ಹುರುನ್ ಇಂಡಿಯಾ ರೀಸರ್ಚ್ ಸಂಸ್ಥೆ ಬಿಡುಗಡೆ ಮಾಡಿದ್ದು , ಇದು ದೇಶದ ಅತೀ ಹೆಚ್ಚು ಶ್ರೀಮಂತರು ಇರುವ ನಗರಗಳನ್ನು ಗುರುತಿಸಿ ಲೆಕ್ಕಾಚಾರ ನಡೆಸಿದೆ.
ಈ ವರ್ಷ ಭಾರತವು 94 ಹೊಸ ಬಿಲಿಯನೇರ್‌ಗಳನ್ನು ಸ್ವಾಗತಿಸಿದೆ. ಭಾರತದ ಬಿಲಿಯನೇರ್‌ಗಳು ಸಾಮೂಹಿಕ ಸಂಪತ್ತು ಸರಿಸುಮಾರು 1 ಟ್ರಿಲಿಯನ್ ಯುಎಸ್ ಡಾಲರ್. ಇದು ಒಟ್ಟು ಜಾಗತಿಕ ಸಂಪತ್ತಿನ ಶೇ. 7ರಷ್ಟಿದೆ. ಯುನೈಟೆಡ್ ಸ್ಟೇಟ್ಸ್ ಬಳಿಕ ಜಾಗತಿಕವಾಗಿ ಇದು ಎರಡನೇ ಅತಿ ಹೆಚ್ಚು ಏರಿಕೆಯಾಗಿದೆ.
ಇದು ಭಾರತದ ಆರ್ಥಿಕ ರಾಜಧಾನಿ ವೇಗವಾಗಿ ಬೆಳೆಯುತ್ತಿರುವ ಮುಂಬಯಿ ಅನ್ನು ವಿಶ್ವದ ಮೂರನೇ ಶ್ರೀಮಂತ ನಗರವನ್ನಾಗಿ ಮಾಡಿದೆ ಎಂದು ಹುರುನ್ ಇಂಡಿಯಾ ರೀಸರ್ಚ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
ಭಾರತದ ಅತ್ಯಂತ ಶ್ರೀಮಂತ ನಗರವಾದ ಮುಂಬಯಿ ಈಗ ಒಟ್ಟು 386 ಬಿಲಿಯನೇರ್‌ಗಳನ್ನು ಹೊಂದಿದೆ. ಈ ವರ್ಷವೊಂದರಲ್ಲೇ 58 ಹೊಸ ವ್ಯಕ್ತಿಗಳು ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ನಗರದ ಸಂಪತ್ತು ಕಳೆದ ವರ್ಷದಿಂದ ಶೇ. 47ರಷ್ಟು ಏರಿಕೆಯಾಗಿದೆ.
ದೆಹಲಿ 18 ಹೊಸ ಬಿಲಿಯನೇರ್‌ಗಳ ಸೇರ್ಪಡೆಯೊಂದಿಗೆ ಈಗ ಪಟ್ಟಿಯಲ್ಲಿ ಒಟ್ಟು 217 ಬಿಲಿಯನೇರ್ ಗಳನ್ನು ಹೊಂದಿದೆ. ಇದು ಭಾರತದಲ್ಲಿ ಅತಿ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ ಎರಡನೇ ನಗರವಾಗಿದೆ. ಈ ಬಾರಿ ಹೈದರಾಬಾದ್ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಮೊದಲ ಬಾರಿಗೆ ಬೆಂಗಳೂರನ್ನು ಹಿಂದಿಕಿರುವ ಹೈದರಾಬಾದ್ ಶ್ರೀಮಂತ ನಿವಾಸಿಗಳ ವಿಷಯದಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.
17 ಹೊಸ ಬಿಲಿಯನೇರ್‌ಗಳ ಸೇರ್ಪಡೆಯು ಹೈದರಾಬಾದ್‌ನ ಒಟ್ಟು ಮೊತ್ತವನ್ನು 104 ಕ್ಕೆ ತಂದಿದೆ. ಆದರೆ ಬೆಂಗಳೂರು 100 ಶ್ರೀಮಂತ ವ್ಯಕ್ತಿಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಉಳಿದಂತೆ ಚೆನ್ನೈ-82, ಕೋಲ್ಕತ್ತಾ-69, ಅಹಮದಾಬಾದ್-67, ಪುಣೆ-53, ಸೂರತ್-28, ಗುರುಗ್ರಾಮ-23 ಬಿಲಿಯನೇರ್ ಗಳನ್ನು ಹೊಂದಿದ್ದು ಕ್ರಮವಾಗಿ ಸ್ಥಾನ ಗಳಿಸಿದೆ.