ಮುಂಡಗೋಡ | ಸಿನಿಮೀಯ ರೀತಿಯಲ್ಲಿ ಚಾಕು ತೋರಿಸಿ ಉದ್ಯಮಿ ಅಪಹರಣ

ಹೊಸ ದಿಗಂತ ವರದಿ,ಮುಂಡಗೋಡ:

ಇಲ್ಲಿನ ಶಾಸಕರ ಮಾದರಿ ಶಾಲೆ ಎದುರಿನ ರಸ್ತೆಯಲ್ಲಿ ಸ್ಕೂಟರನಲ್ಲಿ ಸಂಚರಿಸುತ್ತಿದ್ದ ಯುವಮುಖಂಡ ನೂರಾನಿಗಲ್ಲಿಯ ನಿವಾಸಿ ಜಮೀರ ಅಹ್ಮದ್ ದರ್ಗಾವಾಲೆ(37) ಅವರ ಸ್ಕೂಟರ್ ಗೆ ದುಷ್ಕರ್ಮಿಗಳು ಹಿಂಬದಿಯಿಂದ ಕಾರಿನಿಂದ ಡಿಕ್ಕಿ ಹೊಡೆಸಿ, ಚಾಕು ತೋರಿಸಿ ಗುರುವಾರ ಸಂಜೆ ಅಪಹರಣ ಮಾಡಿದ್ದರು.

ಸ್ಕೂಟರನಲ್ಲಿದ್ದ ಮತ್ತೊಬ್ಬ ಸವಾರ ಆರೋಪಿಗಳಿಂದ ತಪ್ಪಿಸಿಕೊಂಡು, ಪೊಲೀಸರಿಗೆ ಘಟನೆಯ ವಿವರ ತಿಳಿಸಿದ್ದ. ಶಿರಸಿ ಡಿವೈಎಸ್ ಪಿ ಮಾರ್ಗರ್ದರ್ಶನದಲ್ಲಿ ಸಿಪಿಐ ರಂಗನಾಥ ನೀಲಮ್ಮನವರ, ಪಿಎಸ್ಐ ಪರುಶುರಾಮ ಮಿರ್ಜಗಿ, ಪಿಎಸ್ಐ ಹನಮಂತ ಕುಡಗುಂಟಿ ನೇತೃತ್ವದ ತಂಡಗಳು ಆರೋಪಿಗಳ ಪತ್ತೆ ಕಾರ್ಯ ಕೈಗೊಂಡರು.

ಪ್ರಕರಣ ಭೇದಿಸಿದ ಪೊಲೀಸರು
ಅಪಹರಣ ಪ್ರಕರಣ ನಡೆದ 24ಗಂಟೆಯೊಳಗೆ ಪೊಲೀಸರು ಬೆಳಗಿನ ಜಾವದವರೆಗೂ ತೀವ್ರ ಕಾರ್ಯಾಚರಣೆ ನಡೆಸಿ ಅಪಹರಣಗೊಂಡಿದ್ದ ವ್ಯಕ್ತಿ ಜಮೀರ ಅಹ್ಮದ ದರ್ಗಾವಾಲೆಯನ್ನು ರಕ್ಷಿಸಿ, ಕೃತ್ಯದಲ್ಲಿ ಭಾಗಿಯಾದ ಕೆಲವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.

ಆರೋಪಿಗಳು ಜಮೀರ ಅಹ್ಮದ ಕುಟುಂಬದವರಿಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದರು. ಇದರ ಜಾಡನ್ನು ಬೆನ್ನಟ್ಟಿದ ಪೊಲೀಸರು, ನಾಲ್ಕು ತಂಡಗಳಲ್ಲಿ ಕಾರ್ಯಾಚರಣೆ ಕೈಗೊಂಡು, ಬೆಳಗಾವಿ ಜಿಲ್ಲೆಯ ಗೋಕಾಕ್ ಸನಿಹ ಈ ಕೃತ್ಯವನ್ನು ಬೇಧಿಸಿದ್ದಾರೆ ಎನ್ನಲಾಗಿದೆ.

‘ಕೃತ್ಯದ ಪ್ರಮುಖ ಆರೋಪಿ ಕೊಲೆ ಆರೋಪವೊಂದರಲ್ಲಿ ಈಚೆಗೆ ಜಾಮೀನಿನ ಮೇಲೆ ಹೊರಬಂದಿದ್ದ. ನಂತರ, ಜಮೀರ ಅಹ್ಮದ ದರ್ಗಾವಾಲೆಯ ಪರಿಚಯ ಮಾಡಿಕೊಂಡ ನಂತರ, ಅಪಹರಣದ ಸಂಚು ರೂಪಿಸಿದ್ದ’ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

‘ಪಟ್ಟಣದ ಜಮೀರ ಅಹ್ಮದ ದರ್ಗಾವಾಲೆಯನ್ನು ಕಾರಿನಲ್ಲಿ ಬಂದ ವ್ಯಕ್ತಿಗಳು ಅಪಹರಿಸಿದ ಘಟನೆ ಬೇಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಶುಕ್ರವಾರ ಬೆಳಗಿನ ಜಾವ ಜಮೀರನನ್ನು ರಕ್ಷಿಸಿ, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಕೃತ್ಯದ ಹಿಂದೆ ಯಾರಿದ್ದಾರೆ. ಯಾವ ಉದ್ದೇಶಕ್ಕೆ ಅಪಹರಣ ಮಾಡಿದ್ದರು ಎಂಬುದು ತನಿಖೆಯ ನಂತರ ತಿಳಿಯಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!