ಹೊಸ ದಿಗಂತ ವರದಿ, ಮುಂಡಗೋಡ:
ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಹೆಣ್ಣು ಮಗುವಿಗೆ ಜನ್ಮ ನೀಡಿದ ಬಗ್ಗೆ ತಡವಾಗಿ ಬೆಳಕಿಗೆ ಬಂದಿದ್ದು, ವಿದ್ಯಾರ್ಥಿನಿಗೆ ಕೊಲೆ ಬೆದರಿಕೆಯನ್ನು ಹಾಕಿ ಲೈಂಗಿಕವಾಗಿ ಬಳಸಿಕೊಂಡ ಯುವಕನ ಮೇಲೆ ಪೋಕ್ಸೋ ಕಾಯಿದೆಯಡಿಯಲ್ಲಿ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ಯುವಕನನ್ನು ಬಂಧಿಸಲಾಗಿದೆ.
ಪಕ್ಕದ ತಾಲೂಕಿನ ಅಪ್ರಾಪ್ತ ವಿದ್ಯಾರ್ಥಿನಿ ಒಬ್ಬಳು ಮುಂಡಗೋಡ ತಾಲೂಕಿನ ಗ್ರಾಮ ಒಂದರ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದಳು. ಆ ಸಮಯದಲ್ಲಿ ಯುವಕ ಅಪ್ರಾಪ್ತೆಯನ್ನು ಲೈಂಗಿಕವಾಗಿ ಬಳಸಿಕೊಂಡು ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನ ಜೀವ ಸಹಿತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದನು. ಇದರಿಂದಾಗಿ ಭಯ ಭೀತಳಾದ ವಿದ್ಯಾರ್ಥಿನಿ ಈ ವಿಷಯ ಯಾರಿಗೆ ತಿಳಸಿರಲ್ಲಿಲ್ಲ. ಬುಧವಾರ ವಿದ್ಯಾರ್ಥಿನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದ ರಿಂದ ಪಾಲಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದಾಗ ಅಪ್ರಾಪ್ತ ವಿದ್ಯಾರ್ಥಿನಿ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.
ಅಪ್ರಾಪ್ತೆಯಾಗಿದ್ದರಿಂದ ವೈದ್ಯರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿ ನಂತರ ಅಪ್ರಾಪ್ತ ವಿದ್ಯಾರ್ಥಿನಿಗೆ ವೈದ್ಯರು ಹೆರಿಗೆ ಮಾಡಿದ್ದಾರೆ. ಹೆಣ್ಣು ಮಗು ಜನಿಸಿದ್ದು. ಆ ಮಗುವಿಗೆ ಉಸಿರಾಟದಲ್ಲಿ ತೊಂದರೆ ಇರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦ ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ