ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಮೆಗಾ ಹರಾಜಿಗೆ ಅದ್ದೂರಿ ತೆರೆ ಬಿದ್ದಿದ್ದು, ಎಲ್ಲಾ ಫ್ರಾಂಚೈಸಿಗಳು ಬಲಿಷ್ಠ ತಂಡ ಕಟ್ಟುವಲ್ಲಿ ಭಾಗಶಃ ಯಶಸ್ವಿಯಾಗಿವೆ. ಆರ್‌ಸಿಬಿ ಕೂಡ ಮುಂದಿನ ವರ್ಷ ಹೊಸ ತಂಡದೊಂದಿಗೆ ಕ್ರಿಕೆಟ್ ಅಖಾಡಕ್ಕಿಳಿಯಲಿದೆ.
ಹರಾಜಿಗೂ ಮುನ್ನ ಆರ್‌ಸಿಬಿ ಮೂವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿತ್ತು. ಉಳಿದ ಮೂವರನ್ನು ಹರಾಜಿನಲ್ಲಿ ಆರ್ಟಿಎಮ್ ಬಳಸಿ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಿದೆ ಎಂದು ಭಾವಿಸಿದ್ದರು. ಆ ಮೂವರು ಆಟಗಾರರಲ್ಲಿ ತಂಡದ ಮಾಜಿ ನಾಯಕ ಫಾಫ್ ಡುಪ್ಲೆಸಿಸ್, ಮೊಹಮ್ಮದ್ ಸಿರಾಜ್ ಹಾಗೂ ವಿಲ್ ಜ್ಯಾಕ್ಸ್ ಸೇರಿದ್ದರು. ಆದರೆ ಹರಾಜಿನ ವೇಳೆ ಆರ್‌ಸಿಬಿ, ಈ ಮೂವರ ಮೇಲೆ ಆರ್ಟಿಎಮ್ ಬಳಸಲಿಲ್ಲ. ಇದರಿಂದ ಈ ಮೂವರು ಇದೀಗ ಹೊಸ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಅದಕ್ಕೂ ಮುನ್ನ ತಂಡದೊಂದಿಗೆ ಸಾಕಷ್ಟು ವರ್ಷ ಆಡಿದ್ದ ಈ ಆಟಗಾರರು, ಆರ್‌ಸಿಬಿ ಹಾಗೂ ಅದರ ಅಭಿಮಾನಿಗಳಿಗೆ ಭಾವನಾತ್ಮಕ ಸಂದೇಶದ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಇಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊವೊಂದನ್ನುಹಂಚಿಕೊಂಡಿರುವ ಫಾಫ್ ಡುಪ್ಲೆಸಿಸ್, ಆರ್‌ಸಿಬಿ ಜೊತೆ ಕಳೆದ ಮೂರು ವರ್ಷಗಳನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
‘ ಆರ್‌ಸಿಬಿ ಜೊತೆಗಿನ ನನ್ನ ಅಧ್ಯಾಯ ಮುಗಿದಿದೆ. ಆರ್‌ಸಿಬಿ ಜೊತೆಗಿನ ಈ ಮೂರು ವರ್ಷಗಳ ಪ್ರಯಾಣ ಅದ್ಭುತವಾಗಿತ್ತು. ನಾನು ಮೂರು ವರ್ಷಗಳ ಹಿಂದೆ ಆರ್‌ಸಿಬಿಗೆ ಸೇರಿದಾಗ, ಈ ಪ್ರಯಾಣವು ಇಷ್ಟು ಅದ್ಭುತವಾಗಿ ಆರಂಭವಾಗುತ್ತದೆ ಎಂದು ನನಗೆ ತಿಳಿದಿರಲಿಲ್ಲ. ಬೆಂಗಳೂರು ನಗರ ಮತ್ತು ಆರ್‌ಸಿಬಿಯ ಅಭಿಮಾನಿಗಳೆಂದರೆ ನನಗೆ ತುಂಬಾ ಅಚ್ಚುಮೆಚ್ಚು. ಬೆಂಗಳೂರು ಮತ್ತು ಬೆಂಗಳೂರಿನ ಜನರು ನನ್ನ ವ್ಯಕ್ತಿತ್ವದ ಭಾಗವಾಗಿದ್ದಾರೆ. ನಾನು ಯಾವಾಗಲೂ ಈ ನೆನಪುಗಳನ್ನು ಮತ್ತು ಒಡನಾಟವನ್ನು ನನ್ನೊಂದಿಗೆ ಕೊಂಡೊಯ್ಯುತ್ತೇನೆ. ಈ ಮೂರು ವರ್ಷಗಳನ್ನು ತುಂಬಾ ವಿಶೇಷವಾಗಿಸಿದ್ದಕ್ಕಾಗಿ ಧನ್ಯವಾದಗಳು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡುವುದು ನನ್ನ ವೃತ್ತಿಜೀವನದ ಶ್ರೇಷ್ಠ ಅನುಭವಗಳಲ್ಲಿ ಒಂದಾಗಿದೆ. ಅಭಿಮಾನಿಗಳ ಶಕ್ತಿ, ಉತ್ಸಾಹ ಮತ್ತು ಬೆಂಬಲವು ಅದನ್ನು ನಿಜವಾಗಿಯೂ ಅನನ್ಯಗೊಳಿಸುತ್ತದೆ. ಪ್ರತಿ ಬಾರಿ ಮೈದಾನಕ್ಕೆ ಕಾಲಿಟ್ಟಾಗಲೂ ಅಲ್ಲಿನ ವಾತಾವರಣ ಮಾಂತ್ರಿಕತೆಯಿಂದ ಕೂಡಿರುತ್ತಿತ್ತು. ವಿದಾಯ ಹೇಳುವುದಕ್ಕೂ ಮುನ್ನ ನಾನು, ಅಭಿಮಾನಿಗಳು, ನನ್ನ ತಂಡದ ಸದಸ್ಯರು, ಸಿಬ್ಬಂದಿ, ತರಬೇತುದಾರರು ಮತ್ತು ಮಾಲೀಕರು ಸೇರಿದಂತೆ ಎಲ್ಲರಿಗೂ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನಿಮ್ಮೊಂದಿಗೆ ಈ ಪ್ರಯಾಣದ ಭಾಗವಾಗಿದಿದ್ದು ನನಗೆ ಗೌರವವಾಗಿದೆ ಎಂದು ಬರೆದುಕೊಂಡಿದ್ದಾರೆ.