August 16, 2026
Sunday, August 16, 2026
spot_img

ದಲಿತರ ಹಕ್ಕು, ಮೀಸಲಾತಿ ವಿಚಾರದಲ್ಲಿ ಬಿಜೆಪಿ ಹೋರಾಟಕ್ಕೆ ಸಜ್ಜು: ಸಂಸದ ಗೋವಿಂದ ಕಾರಜೋಳ

ಹೊಸದಿಗಂತ ವರದಿ ಚಿತ್ರದುರ್ಗ:

ದಲಿತರ ಅಭಿವೃದ್ಧಿಗಾಗಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂವಿಧಾನಕ್ಕೆ ತಿದ್ದುಪಡಿ ತಂದು ಮಹತ್ವದ ಕ್ರಮ ಕೈಗೊಂಡಿದ್ದರು ಎಂದು ಸಂಸದ ಗೋವಿಂದ ಎಂ. ಕಾರಜೋಳ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಘಟಕದ ಪದಗ್ರಹಣ ಹಾಗೂ ಪದಾಧಿಕಾರಿಗಳ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

2022ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿದ್ದು, ಇದರ ಕೀರ್ತಿ ಬಿಜೆಪಿಗೆ ಸಲ್ಲಬೇಕು ಎಂದು ಹೇಳಿದರು. ಕಾಂಗ್ರೆಸ್ ಪಕ್ಷವು ಲಂಬಾಣಿ, ಭೋವಿ ಸಮುದಾಯಗಳನ್ನು ಪರಿಶಿಷ್ಟರ ಪಟ್ಟಿಯಿಂದ ತೆಗೆಯಲಾಗುತ್ತದೆ ಎಂದು ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸಿತ್ತು ಎಂದು ಆರೋಪಿಸಿದರು.

ಎಸ್‌ಸಿಪಿ ಹಾಗೂ ಟಿಎಸ್‌ಪಿ ಯೋಜನೆಗಳ ಸುಮಾರು ₹49 ಸಾವಿರ ಕೋಟಿ ಹಣವನ್ನು ಕಾಂಗ್ರೆಸ್ ಸರ್ಕಾರ ಬೇರೆ ಉದ್ದೇಶಗಳಿಗೆ ಬಳಸಿಕೊಂಡಿದೆ ಎಂದು ಕಾರಜೋಳ ದೂರಿದರು. ಬಿಜೆಪಿ ಸಂವಿಧಾನವನ್ನು ಬದಲಾಯಿಸುವುದಿಲ್ಲ. ಈ ಕುರಿತು ನಡೆಯುತ್ತಿರುವ ಪ್ರಚಾರ ಕಾಂಗ್ರೆಸ್‌ನ ಪಿತೂರಿ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ:

ಅಸ್ಪೃಶ್ಯತೆ ಮತ್ತು ಅಸಮಾನತೆ ಇರುವವರೆಗೆ ಮೀಸಲಾತಿ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. ಗಂಗಾ ಕಲ್ಯಾಣ ಯೋಜನೆಯಡಿ ಪ್ರತಿ ತಾಲೂಕಿಗೆ ಕನಿಷ್ಠ 50 ಬೋರ್‌ವೆಲ್‌ಗಳನ್ನು ಒದಗಿಸುವಂತೆ ಒತ್ತಾಯಿಸಿ ಹೋರಾಟ ನಡೆಸಬೇಕು ಎಂದು ಪದಾಧಿಕಾರಿಗಳಿಗೆ ಕರೆ ನೀಡಿದರು.

ಮಾಜಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಕಾಂಗ್ರೆಸ್‌ನ ಅಪಪ್ರಚಾರದಿಂದ 2023ರ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಯಿತು ಎಂದು ಹೇಳಿದರು. ಎಸ್‌ಸಿ, ಎಸ್‌ಟಿ ಅಭಿವೃದ್ಧಿಗೆ ಮೀಸಲಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪರಶುರಾಂ ಸೇರಿದಂತೆ ಹಲವು ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ, ಉಪಾಧ್ಯಕ್ಷ ಡಾ. ಸಿದ್ದಾರ್ಥ ಗುಂಡಾರ್ಪಿ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಮಾಜಿ ಸದಸ್ಯ ಡಾ. ಎ.ಎಚ್. ಶಿವಯೋಗಿಸ್ವಾಮಿ, ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಸುರೇಶ್, ಜಿಲ್ಲಾ ಕಾರ್ಯದರ್ಶಿ ಜಿ.ಎಚ್. ಮೋಹನ್, ಪ್ರಧಾನ ಕಾರ್ಯದರ್ಶಿ ಮಾಧುರಿ ಗಿರೀಶ್, ಬಾಳೆಕಾಯಿ ರಾಮದಾಸ್ ಮತ್ತಿತರರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !