ಕರ್ನಾಟಕ ಅಭಿವೃದ್ಧಿ ಮಾಡುವ ಗುರಿ ನನ್ನದು: ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶಿವಮೊಗ್ಗ ತಾಲೂಕಿನ ಆಯನೂರಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿಪ್ರಧಾನಿ ನರೇಂದ್ರ ಮೋದಿ (Narendra Modi) ಭಾಗವಹಿಸಿದರು.

ಈ ವೇಳೆ ಕನ್ನಡದಲ್ಲೇ ಭಾಷಣ ಆರಂಭಿಸಿದ ಅವರು, ಮಲೆನಾಡಿನ ಮಡಿಲು ಸೌಂದರ್ಯದ ಬೀಡು ಶಿವಮೊಗ್ಗದ (Shivamogga) ಜನತೆಗೆ, ರಾಷ್ಟ್ರಪತಿ ಕುವೆಂಪು ಭೂಮಿಗೆ, ದೇವಿ ಸಿಗಂದೂರು ಚೌಡೇಶ್ವರಿಗೆ, ಶಿವಮೊಗ್ಗದ ಕೋಟೆ ಆಂಜನೇಯನಿಗೆ ನಮಸ್ಕರಿಸಿದರು.

ಬಳಿಕ ಮಾತು ಮುಂದುವರಿಸಿ, ನೀಟ್ ಪರೀಕ್ಷೆ ಇಂದು ಕೂಡ ಇತ್ತು. ಮೊದಲು ಮಕ್ಕಳ ಪರೀಕ್ಷೆ ಮುಖ್ಯ. ಈ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಬೆಳಗ್ಗೆ ಬೇಗ ರೋಡ್ ಶೋ ಮಾಡಿದ್ದೆವು. ಇಂದು ಭಾನುವಾರವಾಗಿದ್ದರೂ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಜನರು ನಮಗೆ ನೀಡುತ್ತಿರುವ ಪ್ರೀತಿ ವಿಶ್ವಾಸ ಮರೆಯುವುದಿಲ್ಲ. ಜೀವನಪೂರ್ತಿ ಕರ್ನಾಟಕದ ಋಣಿಯಾಗಿರುತ್ತೇವೆ ಎಂದು ಹೇಳಿದ ಮೋದಿ, ಅಸಲಿ ಗ್ಯಾರಂಟಿ ನೀಡುತ್ತಿದ್ದೇನೆ, ನಮ್ಮ ಪರೀಕ್ಷೆ ಮೇ 10 ರಂದು ಇದೆ. ನಿಮ್ಮ ಪ್ರತಿಯೊಬ್ಬರ ಅಮೂಲ್ಯವಾದ ವೋಟ್ ಬಿಜೆಪಿಗೆ ನೀಡುವ ಮೂಲಕ ಪ್ರಬಲ ರಾಜ್ಯವಾಗಿ ಅಭಿವೃದ್ಧಿ ಪಡಿಸಲು ಸಹಕರಿಸುವಂತೆ ಮನವಿ ಮಾಡಿದರು.

ಬಳಿಕ ಕಾಂಗ್ರೆಸ್ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಯುವಕರ ಕಲ್ಯಾಣಕ್ಕಾಗಿ ಕಾಂಗ್ರೆಸ್​ ಸರ್ಕಾರ ಏನೂ ಮಾಡಿರಲಿಲ್ಲ. 10 ಲಕ್ಷ ಉದ್ಯೋಗ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಯಾವುದೇ ಉದ್ಯೋಗ ಸೃಷ್ಟಿಸದೇ ಯುವಕರನ್ನು ಮೋಸ ಮಾಡಿದೆ. ಈಗ ಕಾಂಗ್ರೆಸ್​ ಸುಳ್ಳು ಗ್ಯಾರಂಟಿ ನೀಡಿ ರಾಜ್ಯದ ಜನರಿಗೆ ಮೋಸ ಮಾಡುತ್ತಿದೆ ಎಂದರು.

ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಕಾಂಗ್ರೆಸ್​ ಲೂಟಿ ಮಾತ್ರ ಮಾಡಿದೆ. ಶಾಲೆಗಳಲ್ಲಿ ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಕಲ್ಪಿಸಿರಲಿಲ್ಲ. ಭ್ರಷ್ಟಾಚಾರದ ಮೂಲಕ ಕಾಂಗ್ರೆಸ್​ ನಾಯಕರು ಶ್ರೀಮಂತರಾಗುತ್ತಿದ್ದಾರೆ. ಆದರೆ ಕರ್ನಾಟಕದ ಅಭಿವೃದ್ಧಿಗೆ ಒಳ್ಳೆಯ ಯೋಜನೆ ತಂದಿಲ್ಲ. ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಳಕ್ಕಾಗಿ ಬಿಜೆಪಿ ಸರ್ಕಾರ ಜಾರಿ ಮಾಡಿದ ಕಾನೂನನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ ಹೇಳುತ್ತಿದೆ. ಇದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಎಂದರು.

ಆದ್ರೆ ನಾವು ಪ್ರತಿ ವರ್ಷ 30 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿದ್ದೇವೆ. ಕೊವಿಡ್ ಸಂದರ್ಭದಲ್ಲೂ 30 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿದ್ದೇವೆ. 9 ವರ್ಷಗಳಲ್ಲಿ 2000ಕ್ಕೂ ಹೆಚ್ಚು ವಿವಿಧ ಬಿತ್ತನೆ ಬೀಜ ಉತ್ಪಾದನೆ ಮಾಡಲಾಗಿದೆ, ಪ್ರಧಾನಮಂತ್ರಿ ಬೆಳೆ ವಿಮೆ ಯೋಜನೆ ಮೂಲಕ ರೈತರ ಕಲ್ಯಾಣಕ್ಕೆ ಶ್ರಮಿಸಲಾಗಿದೆ, ಪಿಎಂ ಫಸಲ್ ಬಿಮಾ ಯೋಜನೆಯಡಿ 1 ಲಕ್ಷ 30 ಕೋಟಿ ಹಣ ಮಂಜೂರು ಮಾಡಲಾಗಿದೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಶಿವಮೊಗ್ಗದ ಉಡುತಡಿ ಅಕ್ಕ ಮಹಾದೇವಿಯವರ ಜನ್ಮಸ್ಥಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ, ಸ್ಟಾರ್ಟಪ್​ ಕ್ಷೇತ್ರದಲ್ಲೂ ನಾವು ಸಾಕಷ್ಟು ಬೆಳೆದಿದ್ದೇವೆ, ದೇಶದ ವಿವಿಧ ಭಾಗಗಳಲ್ಲಿ ಸೈನಿಕ ಶಾಲೆಗಳನ್ನು ತೆರೆದಿದ್ದೇವೆ ಎಂದು ಮೋದಿ ಹೇಳಿದರು.

ಯಡಿಯೂರಪ್ಪ ಮತ್ತು ಅಡಿಕೆ ಬೆಳೆಗಾರರ ಬಗ್ಗೆ ಮೋದಿ ಮಾತು:
ನಾನು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಯಡಿಯೂರಪ್ಪ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದರು. ಆ ಸಂದರ್ಭ ಅಡಕೆ ಬೆಳೆಗಾರರ ಸಮಸ್ಯೆ ಪರಿಹಾರಕ್ಕಾಗಿ ಯಡಿಯೂರಪ್ಪ ಅವರು ನಿಯೋಗ ತೆಗೆದುಕೊಂಡು ದೆಹಲಿಗೆ ಬಂದಿದ್ದರು. ನಂತರ ಗುಜರಾತ್​ಗೆ ಬಂದು ರೈತರನ್ನು ಉಳಿಸುವಂತೆ ಮನವಿ ಮಾಡಿಕೊಂಡಿದ್ದರು. ಅದರಂತೆ ನಾನು ಪ್ರಧಾನಿಯಾದ ನಂತರ ಅಡಿಕೆ ಬೆಳೆಗಾರರಿಗೆ ಕಲ್ಯಾಣಕ್ಕೆ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯೋಜನೆಗಳ ಮೂಲಕ ರೈತರ ಸಮಸ್ಯೆಗೆ ಪರಿಹಾರ ಕೈಗೊಂಡಿದ್ದೇವೆ. ಹೀಗಾಗಿ ಬೆಳೆಗಾರರು ಯಾವುದೇ ಕಾರಣಕ್ಕೂ ಆಂತಕಕ್ಕೆ ಒಳಗಾಗಬೇಡಿ ಎಂದರು.

ಇತ್ತೀಚೆಗೆ ಕೆಎಸ್​ ಈಶ್ವರಪ್ಪ ಅವರ ಜೊತೆ ದೂರವಾಣಿ ಸಂಪರ್ಕದ ಮೂಲಕ ಮಾತನಾಡಿದಾಗ ಶಿವಮೊಗ್ಗದ ಜನತೆ ನನಗೆ ವಿಶ್ವಾಸ ತೋರಿದ್ದಾರೆ. ನನಗೆ ಗೊತ್ತು ಬಿಜೆಪಿ ಸರಕಾರ ಮತ್ತೆ ಬರಲಿದೆ. ಯಡಿಯೂರಪ್ಪ ಅವರು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ನಾವೆಲ್ಲರೂ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವ ಯಡಿಯೂರಪ್ಪ ಅವರ ಸಂಕಲ್ಪ ಈಡೇರಿಸಬೇಕು ಎಂದರು.

ರೈತ ಬಂಧು ಯಡಿಯೂರಪ್ಪ ಅನೇಕ ಯೋಜನೆ ಜಾರಿಗೊಳಿಸಿದ್ದಾರೆ. ಅಭಿವೃದ್ಧಿಯ ಮೂಲಕ ನಿಮ್ಮ ಆಶೀರ್ವಾದದ ಋಣ ತೀರಿಸುತ್ತೇವೆ. ಅಧಿಕಾರಕ್ಕೆ ಬಂದರೇ ಕರ್ನಾಟಕವನ್ನು ನಾವು ಅಭಿವೃದ್ಧಿ ಮಾಡುತ್ತೇವೆ. ಕರ್ನಾಟಕವನ್ನು ಅಭಿವೃದ್ಧಿ ಮಾಡುವ ಗುರಿ ನನ್ನದು ಎಂದು ಮೋದಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!