ನನ್ನ ಆರೋಗ್ಯ ಸುಧಾರಿಸಿದೆ, ಬನ್ನಿ…ಪಕ್ಷವನ್ನು ಚೈತನ್ಯಶೀಲವಾಗಿ ಮರಳಿ ಕಟ್ಟೋಣ: ಕುಮಾರಸ್ವಾಮಿ ಕರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಕ್ಷದ ಉಳಿವು, ಗೆಲುವಿಗಾಗಿ ಅವಿರತವಾಗಿ ಶ್ರಮಿಸೋಣ. ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ. ಈ ವಿವೇಕವಾಣಿಯೇ ನಮ್ಮ ಪಾಲಿನ ಮೂಲಮಂತ್ರ ಎಂದು ಕಾರ್ಯಕರ್ತರನ್ನು ಮಾಜಿ ಸಿಎಂ ಕುಮಾರಸ್ವಾಮಿ (H.D Kumaraswamy) ಹುರಿದುಂಬಿಸಿದ್ದಾರೆ.

ಮುಂಬರುವ ಲೋಕಸಭಾ, ಜಿಲ್ಲಾ, ತಾಲ್ಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ಸೇರಿದಂತೆ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಸೆ.10 ರಂದು ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ ಬೃಹತ್ ಜೆಡಿಎಸ್ (JDS) ಸಮಾವೇಶ ನಡೆಯಲಿದೆ.

ಈ ಹಿನ್ನೆಲೆ ಕಾರ್ಯಕರ್ತರು ತಪ್ಪದೇ ಸಭೆಗೆ ಬರಬೇಕು. ಪಕ್ಷ ಸಂಘಟನೆ ವಿಚಾರವಾಗಿ ಮುಕ್ತವಾಗಿ ಮಾತನಾಡೋಣ. ಮುಂದಿನ ಹೆಜ್ಜೆಗಳನ್ನು ದೃಢವಾಗಿ ಇಡೋಣ ಎಂದು ಅವರು ಆಹ್ವಾನ ನೀಡಿದ್ದಾರೆ.

ಟ್ವಿಟರ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಅರಮನೆ ಮೈದಾನದ ನಲಪಾಡ್ ಪೆವಿಲಿಯನ್‍ನಲ್ಲಿ ಭಾನುವಾರ ಬೆಳಗ್ಗೆ 10:30ಕ್ಕೆ ಸಭೆ ಆರಂಭವಾಗಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಸಾವಿರಾರು ಕಾರ್ಯಕರ್ತರು ಭಾಗಿಯಾಗಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ನಿಮ್ಮೆಲ್ಲರ ಪ್ರೀತಿ, ಹಾರೈಕೆ, ದೈವದ ಕರುಣೆ, ತಂದೆ ತಾಯಿಯವರ ಆಶೀರ್ವಾದದಿಂದ ನನ್ನ ಆರೋಗ್ಯ ಅತ್ಯುತ್ತಮವಾಗಿ ಸುಧಾರಿಸಿದೆ. ಜೆಡಿಎಸ್ ಪಕ್ಷದ ಚಟುವಟಿಕೆಗಳಲ್ಲಿ ಮತ್ತೆ ಸಕ್ರಿಯವಾಗಿ ಭಾಗಿಯಾಗುತ್ತಿದ್ದೇನೆ. ನಾವೆಲ್ಲರೂ ಪಣತೊಟ್ಟು ಹೊರಡೋಣ. ಪಕ್ಷವನ್ನು ಚೈತನ್ಯಶೀಲವಾಗಿ ಮರಳಿ ಕಟ್ಟೋಣ ಎಂದು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ತೀವ್ರ ಬರ-ನೆರೆ, ಅನಧಿಕೃತ ಲೋಡ್ ಶೆಡ್ಡಿಂಗ್, ಕಾವೇರಿ ಬಿಕ್ಕಟ್ಟಿನಿಂದ ತತ್ತರಿಸುತ್ತಿದೆ. ಅನ್ನ ಕೊಡುವ ರೈತರನ್ನು, ತೆರಿಗೆ ಕಟ್ಟುವ ನಾಗರಿಕರನ್ನು ಕಾಲ ಕಸದಂತೆ ಕಡೆಗಣಿಸಲಾಗಿದೆ. ಈ ದುರಿತ ದಿನಗಳಲ್ಲಿ ನಾವು ಜನರ ಜೊತೆ ಬದ್ಧತೆಯಿಂದ ನಿಲ್ಲಬೇಕು. ಜನಪರ ನಿಲುವು, ಹೋರಾಟ ನಮ್ಮೆಲ್ಲರ ಹೊಣೆಯಾಗಿದೆ. ಇದು ಈ ಹೊತ್ತಿನ ನೈತಿಕ ಜವಾಬ್ದಾರಿ ಎಂದು ಕಾರ್ಯಕರ್ತರು ಹಾಗೂ ಮುಖಂಡರಿಗೆ ಕರೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!