ನನ್ನ ಹಣ ಹೋಯಿತು , ನಾನೀಗ ಏನು ಮಾಡಬೇಕು?: ಟ್ವಿಟರ್ ವಿರುದ್ಧ ಅಮಿತಾಭ್ ಬಚ್ಚನ್ ಅಸಮಾಧಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟ್ವಿಟರ್ ಸಿಇಒ ಎಲಾನ್ ಮಸ್ಕ್​ (Elon Musk) ಇತ್ತೀಚಿನ ದಿನಗಳಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದಾರೆ.

ಇದೀಗ ಟ್ವಿಟರ್​​ನಲ್ಲಿ ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕು ಎನ್ನುವ ನಿಯಮವನ್ನು ಅವರು ಜಾರಿಗೆ ತಂದಿದ್ದಾರೆ. ಈ ಬೆನ್ನಲ್ಲೇ ಎಲ್ಲಾ ಖಾತೆಗಳ ಬ್ಲೂಟಿಕ್ ಮಾಯವಾಗಿತ್ತು. ಇದಕ್ಕೆ ಸೆಲೆಬ್ರಿಟಿ ವಲಯದಿಂದ ವಿರೋಧ ವ್ಯಕ್ತವಾಯಿತು. ಈ ಬೆನ್ನಲ್ಲೇ ಎಲಾನ್ ಮಸ್ಕ್ ಮತ್ತೆ ನಿಯಮ ಬದಲಿಸಿದ್ದಾರೆ. ಈ ಬೆಳವಣಿಗೆ ಬಗ್ಗೆ ನಟ ಅಮಿತಾಭ್ ಬಚ್ಚನ್ (Amitabh Bachchan) ಅಸಮಾಧಾನ ಹೊರಹಾಕಿದ್ದಾರೆ.

ಬ್ಲೂಟಿಕ್ ಮಾಯವಾದ ಬೆನ್ನಲ್ಲೇ ಅನೇಕ ಸೆಲೆಬ್ರಿಟಿಗಳು ಸಿಟ್ಟಾದರು. ಕೆಲವರು ತಾವು ಹಣ ಪಾವತಿಸುವುದಿಲ್ಲ ಎಂದು ನೇರವಾಗಿಯೇ ಹೇಳಿದರು. ಈ ಬೆನ್ನಲೇ ಹಲವು ಸೆಲೆಬ್ರಿಟಿಗಳಿಗೆ ಬ್ಲೂಟಿಕ್ ಮರಳಿ ಸಿಕ್ಕಿದೆ. ಇದಕ್ಕೆ ಕಾರಣವೂ ಇದೆ. 1 ಮಿಲಿಯನ್ ಅಂದರೆ 10 ಲಕ್ಷಕ್ಕಿಂತ ಅಧಿಕ ಹಿಂಬಾಲಕರು ಇರುವ ಟ್ವಿಟರ್​ ಬಳಕೆದಾರರ ಖಾತೆಯಲ್ಲಿ ಬ್ಲೂಟಿಕ್ ಹಾಗೆಯೇ ಉಳಿಯುತ್ತದೆ ಎಂದು ಎಲಾನ್ ಮಸ್ಕ್ ಹೇಳಿದ್ದಾರೆ. ಹೀಗಾಗಿ, 1 ಮಿಲಿಯನ್​ಗಿಂತ ಅಧಿಕ ಫಾಲೋವರ್ಸ್ ಇರುವವರ ಖಾತೆಗೆ ಬ್ಲೂಟಿಕ್ ಮರಳಿದೆ.

ಈ ಬೆಳವಣಿಗೆ ಬಗ್ಗೆ ಅಮಿತಾಭ್ ಬಚ್ಚನ್ ಅಸಮಾಧಾನ ಹೊರಹಾಕಿದ್ದಾರೆ. ಯಾಕೆಂದರೆ ಅವರು ಬ್ಲೂಟಿಕ್ ಪಡೆಯಲು ಅವರು ಹಣ ಪಾವತಿಸಿದ್ದರು. ಆ ಬಳಿಕ ಮಸ್ಕ್ ಕಡೆಯಿಂದ ಹೊಸ ಘೋಷಣೆ ಆಯಿತು. ‘ಬ್ಲೂಟಿಕ್ ಪಡೆಯಲು ಹಣ ಪಾವತಿಸಬೇಕು ಎಂದಿರಿ. ನಾನು ಹಣ ಪಾವತಿಸಿದೆ. ಆದರೆ, 1 ಮಿಲಿಯನ್​ಗಿಂತ ಹೆಚ್ಚಿನ ಹಿಂಬಾಲಕರಿದ್ದರೆ ಅವರ ಬ್ಲೂಟಿಕ್​ ಹಾಗೆಯೇ ಇರುತ್ತದೆ ಎಂದು ಈಗ ನೀವು ಹೇಳುತ್ತಿದ್ದೀರಿ. ನನಗೆ 48.4 ಮಿಲಿಯನ್ ಹಿಂಬಾಲಕರಿದ್ದಾರೆ. ನನ್ನ ಹಣ ಈಗಾಗಲೇ ಹೋಗಿದೆ. ನಾನೀಗ ಏನು ಮಾಡಬೇಕು?’ ಎಂದು ಅಮಿತಾಭ್ ಟ್ವೀಟ್ ಮಾಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!