ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊದಲ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಿಯಾದಾಗ 2014ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ವೇಳೆ ಆಗಿನ ಅಧ್ಯಕ್ಷ ಬರಾಕ್ ಒಬಾಮಾ ಅವರ ಜೊತೆ ಮಾತುಕತೆ ನಡೆಸಿದ್ದರು.
ಅವರ ಆ ಮಾತಿನ ಕ್ಷಣವನ್ನು ಅಮೆರಿಕದ ಭಾರತೀಯ ರಾಯಭಾರಿ ವಿನಯ್ ಕ್ವಾತ್ರಾ ನೆನಪಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿಯವರ ಪ್ರವಾಸದ ಸಂದರ್ಭ, ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಮತ್ತು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಭಾರತೀಯ ರಾಯಭಾರಿಯಾಗಿರುವ ವಿನಯ್ ಕ್ವಾತ್ರಾ ಅವರು 2014ರ ಪ್ರಧಾನ ಮಂತ್ರಿಯ ಯುಎಸ್ ಭೇಟಿಯ ಸ್ಮರಣೀಯ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ.
ಆಗ ಒಬಾಮಾ ಅವರ ಕಾರನ್ನು ನೋಡಿ ಅಚ್ಚರಿಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನಿಮ್ಮ ಕಾರು ಹೆಚ್ಚೂ ಕಡಿಮೆ ನನ್ನ ತಾಯಿ ವಾಸವಾಗಿರುವ ಮನೆಯಷ್ಟೇ ದೊಡ್ಡದಾಗಿದೆ ಎಂದು ಹೇಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿಯವರು ಅಮೆರಿಕದ ಅಧ್ಯಕ್ಷರು ಸೇರಿದಂತೆ ವಿಶ್ವ ನಾಯಕರೊಂದಿಗೆ ಸಂಪರ್ಕ ಸಾಧಿಸುವ ಮತ್ತು ಆಳವಾದ ಬಾಂಧವ್ಯವನ್ನು ಬೆಸೆಯುವ ಸಾಮರ್ಥ್ಯ ಹೊಂದಿದ್ದಾರೆ. ಈ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ಪ್ರಧಾನಿ ಮೋದಿಯವರು ವೈಯಕ್ತಿಕ ಮಟ್ಟದಲ್ಲಿ ಜಾಗತಿಕ ನಾಯಕರೊಂದಿಗೆ ಸಂಪರ್ಕ ಸಾಧಿಸುತ್ತಾರೆ, ಸಾಂಸ್ಕೃತಿಕ ಮತ್ತು ಭೌಗೋಳಿಕ ರಾಜಕೀಯ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ತಮ್ಮ ಸ್ವಂತ ಜೀವನದ ಅನುಭವಗಳನ್ನು ಸೆಳೆಯುತ್ತಾರೆ ಎಂದು ಅಂತಾರಾಷ್ಟ್ರೀಯ ಸಭೆಗಳಲ್ಲಿ ಮೋದಿ ಅವರ ಜೊತೆಗಿರುವ ಅಧಿಕಾರಿಗಳು ಹೇಳಿದ್ದಾರೆ.
ಪ್ರವಾಸದ ಸಂದರ್ಭ ಉಭಯ ದೇಶಗಳ ನಾಯಕರ ನಡುವಿನ ಔಪಚಾರಿಕ ಚರ್ಚೆಗಳು ಮುಕ್ತಾಯಗೊಂಡ ನಂತರ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಬರಾಕ್ ಒಬಾಮಾ ಇಬ್ಬರೂ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಸ್ಮಾರಕಕ್ಕೆ ತೆರಳಿದರು.
10ರಿಂದ 12 ನಿಮಿಷಗಳ ಪ್ರಯಾಣ ಅದಾಗಿದ್ದರಿಂದ ಅವರಿಬ್ಬರೂ ಒಬಾಮಾ ಅವರ ವೈಯಕ್ತಿಕ ಕಾರಾದ ಸ್ಟ್ರೆಚ್ ಲಿಮೋಸಿನ್‌ನಲ್ಲಿ ಒಟ್ಟಿಗೆ ಕುಳಿತು ಹರಟುತ್ತಾ ತೆರಳಿದ್ದರು. ಈ ವೇಳೆ ಅವರಿಬ್ಬರೂ ತಮ್ಮ ಕುಟುಂಬದ ಬಗ್ಗೆ ಮಾತನಾಡತೊಡಗಿದರು. ಈ ಅನೌಪಚಾರಿಕೆ ಮಾತುಕತೆಯ ವಿನಿಮಯದಲ್ಲಿ ಒಬಾಮಾ ಮೋದಿಯವರ ತಾಯಿಯ ಬಗ್ಗೆ ಕೇಳಿದರು. ಆಗ ಮುಗುಳ್ನಕ್ಕ ಪಿಎಂ ಮೋದಿ ಅವರು ಪ್ರಾಮಾಣಿಕ ಮತ್ತು ಅನಿರೀಕ್ಷಿತ ಪ್ರತಿಕ್ರಿಯೆಯನ್ನು ನೀಡಿದರು.
“ಒಬಾಮಾ ಅವರೇ, ನೀವು ಇದನ್ನು ನಂಬದಿರಬಹುದು. ಆದರೆ, ನಿಮ್ಮ ಈ ಕಾರು ಎಷ್ಟು ದೊಡ್ಡದಾಗಿದೆಯೋ ನನ್ನ ತಾಯಿ ವಾಸಿಸುವ ಮನೆ ಕೂಡ ಇಷ್ಟೇ ದೊಡ್ಡದಾಗಿದೆ! ನನ್ನ ತಾಯಿ ವಾಸ ಮಾಡುವ ಮನೆಯಷ್ಟು ದೊಡ್ಡದಾದ ಕಾರಿನಲ್ಲಿ ನಾವೀಗ ಪ್ರಯಾಣಿಸುತ್ತಿದ್ದೇವೆ’ ಎಂದು ಹೇಳಿದ್ದರು.ಈ ಹೇಳಿಕೆಯು ಅಮೆರಿಕ ಅಧ್ಯಕ್ಷರನ್ನು ಆಶ್ಚರ್ಯಗೊಳಿಸಿತು. ಏಕೆಂದರೆ ಅವರು ಇದ್ದ ಕಾರು ಸ್ಟ್ರೆಚ್ ಲಿಮೋಸಿನ್ ಆಗಿತ್ತು. ಅದು ಬಹಳ ಐಷಾರಾಮಿಯಾದ ದೊಡ್ಡ ಕಾರಾಗಿತ್ತು. ಮೋದಿಯವರು ತಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಹೇಳಲು ಹಿಂಜರಿಯದೆ ಪ್ರಾಮಾಣಿಕವಾಗಿ ಮಾತನಾಡಿದ್ದು ಒಬಾಮಾ ಅವರಿಗೆ ಬಹಳ ಇಷ್ಟವಾಯಿತು.
ಈ ಮಾತುಕತೆ ವೇಳೆ ಅವರಿಬ್ಬರ ಜೊತೆಗೆ ಲಿಮೋಸಿನ್‌ನಲ್ಲಿದ್ದ ವಿನಯ್ ಕ್ವಾತ್ರಾ, ಈ ಸಂಭಾಷಣೆಯು ಉಭಯ ನಾಯಕರ ನಡುವಿನ ಆಳವಾದ ಸಂಪರ್ಕದ ಬಿಂದುವಾಗಿದೆ ಎಂದು ಹಂಚಿಕೊಂಡಿದ್ದಾರೆ.