ನನ್ನ ಫೋನ್​​ಗೆ ಕರೆ ಬರುತ್ತಿಲ್ಲ, ಕರೆ ಮಾಡಲು ಸಾಧ್ಯವಾಗುತ್ತಿಲ್ಲ: ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಕೇಂದ್ರದ ಮಾಜಿ ಸಚಿವೆ, ಪ್ರತಿಪಕ್ಷಗಳ ಒಕ್ಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೇಟ್ ಆಳ್ವಾ ಅವರು ಫೋನಿಗೆ ಹೊರಗಿನಿಂದ ಕರೆಗಳು ಬರುತ್ತಿಲ್ಲ, ಹೊರಗಿನಿಂದ ಕರೆ ಮಾಡುವಾಗ ಕಾಲ್ ಡೈವರ್ಟ್ ಆಗುತ್ತಿವೆ ಮತ್ತು ನಾನು ಯಾರಿಗಾದರೂ ಕರೆ ಮಾಡಲು ಯತ್ನಿಸಿದಾಗ ಕರೆಗಳು ಸರಿಯಾಗಿ ಕನೆಕ್ಟ್​ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕಳೆದ ರಾತ್ರಿ 9 ಗಂಟೆಗೆ ಟ್ವಿಟರ್​ನಲ್ಲಿ ದೂರು ಹಂಚಿಕೊಂಡಿದ್ದು, ‘ ಕೆಲ ಬಿಜೆಪಿ ಮಿತ್ರರೊಂದಿಗೆ ಮಾತನಾಡಿದ ನಂತರ ನನ್ನ ಮೊಬೈಲಿಗೆ ಬರುವ ಎಲ್ಲ ಕರೆಗಳು ಡೈವರ್ಟ್ ಆಗಿವೆ ಮತ್ತು ನನಗೆ ಕರೆ ಮಾಡಲು ಅಥವಾ ಸ್ವೀಕರಿಸಲು ಆಗುತ್ತಿಲ್ಲ. ನನ್ನ ಫೋನನ್ನು ನೀವು ಮೊದಲಿನ ಸ್ಥಿತಿಗೆ ತಂದಲ್ಲಿ, ನಾನು ಭಾರತೀಯ ಜನತಾ ಪಕ್ಷ, ತೃಣಮೂಲ ಕಾಂಗ್ರೆಸ್ ಅಥವಾ ಬಿಜು ಜನತಾ ದಳದ ಯಾವುದೇ ಸಂಸದರಿಗೆ ಕರೆ ಮಾಡಲ್ಲ ಎಂದು ಪ್ರಾಮಿಸ್ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ಇನ್ನು ಮಹಾನಗರ್ ಟೆಲಿಪೋನ್ ನಿಗಮ ಲಿಮಿಟೆಡ್​ ನೊಂದಿಗೆ ನಡೆಸಿದ ಚರ್ಚೆಯ ಬಗ್ಗೆ ಅವರು ಟ್ವಿಟರ್​ನಲ್ಲಿ ಮಾಹಿತಿ ನೀಡಿದ್ದಾರೆ. ಅದರ ಪ್ರಕಾರ, ಅವರ ಎಂಟಿಎನ್​ಎಲ್ ಕೆವೈಸಿಯನ್ನು ಅಮಾನತು ಮಾಡಲಾಗಿದೆ ಮತ್ತು ಸಿಮ್ ಅನ್ನು ಮುಂದಿನ 24 ಗಂಟೆಗಳೊಳಗೆ ಬ್ಲಾಕ್ ಮಾಡಲಾಗುವುದು ಎಂದು ಎಂಟಿಎನ್​ಎಲ್ ಹೇಳಿದೆ ಎಂದಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಪ್ರತಿಕ್ರಿಯೆ
ಅವರ ಕರೆಯನ್ನು ಯಾರೇ ಆದರೂ ಯಾಕೆ ಕದ್ದಾಲಿಸಬೇಕು? ಅವರು ಯಾರಿಗೆ ಬೇಕಿದ್ದರೂ ಕರೆ ಮಾಡಲಿ. ನಮಗೆ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ.ಅವರ ಫೋನ್‌ ಯಾಕೆ ನಾವು ಕರೆ ಟ್ಯಾಪ್‌ ಮಾಡಲಿ? ಎಂದು ಪ್ರತಿಕ್ರಿಯಿಸಿದರು.

ಟೆಲಿಕಾಂ ಸಚಿವಾಲಯ ಹೇಳಿದ್ದೇನು?
ಮಾರ್ಗರೇಟ್‌ ಆಳ್ವ ದೂರಿನ ಆಧಾರದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಬಿಎಸ್‌ಎನ್‌ಎಲ್‌ ಈಗಾಗಲೇ ಎಫ್‌ಐಆರ್‌ ದಾಖಲಿಸಿದೆ ಎಂದು ಕೇಂದ್ರ ಟೆಲಿಕಾಂ ಸಚಿವಾಲಯದ ಮೂಲಗಳು ತಿಳಿಸಿವೆ.

ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಜಗದೀಪ್ ಧನಕರ್ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಆಡಳಿತಾರೂಢ ಎನ್​ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದಾರೆ. ಇನ್ನು, ಪ್ರತಿಪಕ್ಷಗಳ ಒಕ್ಕೂಟದ ಅಭ್ಯರ್ಥಿಯಾಗಿ ಮಾರ್ಗರೇಟ್ ಆಳ್ವಾ ಸ್ಪರ್ಧೆ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!