ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಪ್ರದರ್ಶನ ಮುಂದುವರೆಸಿದ್ದು, ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಮುಂದಿನ ಪಂದ್ಯ ಟೀಂ ಇಂಡಿಯಾ ಅಕ್ಟೋಬರ್ 14ರಂದು ಪಾಕಿಸ್ತಾನ ತಂಡವನ್ನು ಎದುರಿಸಲಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯವನ್ನು ವಹಿಸಿದೆ.
ಇತ್ತ ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರಿಗೆ ಈ ಈ ಪಂದ್ಯ ವಿಶೇಷವಾಗಿದ್ದು, ಇದಕ್ಕೆ ಕಾರಣ ಅಹಮದಾಬಾದ್ ಅವರ ತವರು ಮೈದಾನವಾಗಿದೆ .
ತವರಿನಂಗಳದಲ್ಲಿ ಪಾಕಿಸ್ತಾನ ಎದುರು ಅಬ್ಬರಿಸಲು ಸಜ್ಜಾಗಿದ್ದಾರೆ. ಹೀಗಿರುವಾಗಲೇ 29 ವರ್ಷದ ಬಲಗೈ ವೇಗಿ ಬುಮ್ರಾ, ತಮಗೆ ಪಾಕಿಸ್ತಾನ ಎದುರಿನ ಪಂದ್ಯಕ್ಕಿಂತ ತಮ್ಮ ತಾಯಿ ಮುಖ್ಯ ಎನ್ನುವುದನ್ನು ಸೂಚ್ಯವಾಗಿ ವಿವರಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಬುಮ್ರಾ, ನಾನು ಸಾಕಷ್ಟು ಸಮಯದಿಂದ ತವರಿನಾಚೆಯೇ ಇದ್ದೇನೆ. ಮನೆಯಲ್ಲಿರುವ ನನ್ನಮ್ಮನನ್ನು ನೋಡಿ ಖುಷಿಯಾಯಿತು ಎಂದು ಬುಮ್ರಾ ಹೇಳಿದ್ದಾರೆ. ಬುಮ್ರಾ, ಆಫ್ಘಾನಿಸ್ತಾನ ಎದುರಿನ ಪಂದ್ಯದ ವೇಳೆ ಕೇವಲ 39 ರನ್ ನೀಡಿ ಪ್ರಮುಖ 4 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ನಾನು ನನ್ನಮ್ಮನನ್ನು ನೋಡೋಕೆ ಹೋಗುತ್ತಿದ್ದೇನೆ. ಅದು ನನ್ನ ಪಾಲಿನ ಮೊದಲ ಆದ್ಯತೆಯ ಕರ್ತವ್ಯವಾಗಿದೆ. ಇದಾದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದ ಬಗ್ಗೆ ಆಲೋಚಿಸುತ್ತೇನೆ ಎಂದು ಬುಮ್ರಾ ಹೇಳಿದ್ದಾರೆ. ಜಗತ್ತಿನ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿ ಗುರುತಿಸಿಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಇದುವರೆಗೂ ಒಂದೇ ಒಂದು ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿಲ್ಲ.
ನಾನಿಲ್ಲಿ ಇದುವರೆಗೂ ಯಾವುದೇ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನಾಡಿಲ್ಲ. ಆದರೆ ನಾನಿಲ್ಲಿ ಟೆಸ್ಟ್ ಪಂದ್ಯವನ್ನಾಡಿದ್ದೇನೆ. ವಾತಾವರಣವನ್ನು ನೋಡಿದರೆ ನಾನು ಇದೀಗ ಇಲ್ಲಿ ಏಕದಿನ ಪಂದ್ಯವನ್ನಾಡಲು ಉತ್ಸುಕನಾಗಿದ್ದೇನೆ. ಸಾಕಷ್ಟು ಜನರು ಪಂದ್ಯವನ್ನು ವೀಕ್ಷಿಸಲು ಬರಲಿದ್ದಾರೆ ಎನ್ನುವ ವಿಶ್ವಾಸವಿದೆ. ಇಲ್ಲಿಯೂ ನಾನು ಚೆನ್ನಾಗಿ ಬೌಲಿಂಗ್ ಮಾಡುವ ವಿಶ್ವಾಸವಿದೆ ಎಂದು ಬುಮ್ರಾ ಹೇಳಿದ್ದಾರೆ.
ಜಸ್ಪ್ರೀತ್ ಬುಮ್ರಾ 5 ವರ್ಷ ತುಂಬುವುದರೊಳಗಾಗಿ ತಮ್ಮ ತಂದೆಯನ್ನು ಕಳೆದುಕೊಂಡಿದ್ದರು. ಇದಾದ ಬಳಿಕ ಶಾಲಾ ಪ್ರಿನ್ಸಿಪಾಲ್ ಆಗಿರುವ ಅವರ ತಾಯಿ ದಲ್ಜೀತ್, ತಮ್ಮ ಮಗನನ್ನು ಅಂತಾರಾಷ್ಟ್ರೀಯ ಕ್ರಿಕೆಟಿಗನನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.