ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ಕಾವರೈಪೇಟೈ ಸಮೀಪ ಮೈಸೂರು-ದರ್ಭಾಂಗ ಬಾಗ್ ಮತಿ ಎಕ್ಸ್‌ಪ್ರೆಸ್ ರೈಲು- ಗೂಡ್ಸ್ ರೈಲು ಅಪಘಾತದ ವಿಚಾರವಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುಮಾರು 300 ಪ್ರಯಾಣಿಕರ ಜೀವವನ್ನು ಬಲಿತೆಗೆದುಕೊಂಡ ಬಾಲಸೋರ್ ಅಪಘಾತದ ಬಳಿಕವೂ ಸರ್ಕಾರ ಎಚ್ಚೆತ್ತುಕೊಳ್ಳುವಲ್ಲಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮೈಸೂರು-ದರ್ಭಾಂಗ್ ರೈಲು ಅಪಘಾತವು ಭೀಕರವಾದ ಬಾಲಸೋರ್ ಅಪಘಾತವನ್ನು ಹೋಲುತ್ತದೆ. ಆ ಅಪಘಾತದಿಂದ ಸರ್ಕಾರ ಯಾವುದೇ ಪಾಠಗಳನ್ನು ಕಲಿತಿಲ್ಲ. ಈ ಅಪಘಾತದ ಹೊಣೆಗಾರಿಕೆ ಮೇಲಿಂದ ಪ್ರಾರಂಭವಾಗುತ್ತದೆ. ಈ ಸರ್ಕಾರ ಎಚ್ಚೆತ್ತುಕೊಳ್ಳುವ ಮೊದಲು ಇನ್ನೂ ಎಷ್ಟು ಕುಟುಂಬಗಳು ನಾಶವಾಗಬೇಕು? ಎಂದು ಅವರು ಟೀಕಿಸಿದ್ದಾರೆ.
ಚೆನ್ನೈ ಸಮೀಪದ ಕವರೈಪೆಟ್ಟೈ ರೈಲು ನಿಲ್ದಾಣದ ಬಳಿ ಶುಕ್ರವಾರ ಸಂಜೆ ಮೈಸೂರು-ದರ್ಭಾಂಗ್ ಬಾಗಮತಿ ಎಕ್ಸ್‌ಪ್ರೆಸ್ ರೈಲು ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ 13 ಬೋಗಿಗಳು ಹಳಿ ತಪ್ಪಿದ್ದವು. ಅಪಘಾತದಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಬಳಿಕ ರೈಲು ಸಂಚಾರ ಸ್ಥಗಿತಗೊಂಡಿದೆ. ರೈಲು ಹಳಿಗಳ ಮೇಲೆ ಬಿದ್ದಿರುವ ಬೋಗಿಗಳನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.