ಮೈಸೂರು: ಪ್ರಧಾನಿ ಮೋದಿ ಆಗಮನಕ್ಕೂ ಮುನ್ನ ಯೋಗ ತಾಲೀಮು ಕಾರ್ಯಕ್ರಮ

ಹೊಸದಿಗಂತ ವರದಿ, ಮೈಸೂರು:
ಜೂನ್ 21ರಂದು ನಡೆಯುವ ವಿಶ್ವ ಯೋಗ ದಿನದಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸಲಿರುವ ಹಿನ್ನೆಲೆಯಲ್ಲಿ ಮೈಸೂರಿನ ಅರಮನೆ ಆವರಣದಲ್ಲಿ ಯೋಗ ಪಟುಗಳಿಂದ ಯೋಗ ತಾಲೀಮು ಕಾರ್ಯಕ್ರಮಕ್ಕೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಪ್ರಧಾನಮಂತ್ರಿಗಳು ಮೈಸೂರಿಗೆ ಆಗಮಿಸುತ್ತಿರುವುದರಿಂದ ಜೂನ್ 5 ಮತ್ತು 12ರಂದು ಯೋಗ ತಾಲೀಮು ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಯಾರಿಗೆಲ್ಲಾ ಅವಕಾಶ ನೀಡಬೇಕು ಎಂಬುದರ ಬಗ್ಗೆ 12ರ ನಂತರ ತೀರ್ಮಾನ ಮಾಡಲಾಗುವುದು ಎಂದರು.
ಸರ್ಕಾರಿ, ಖಾಸಗಿ, ವಿಶೇಷಚೇತನರು ಸೇರಿದಂತೆ ಯೋಗ ಮಾಡುವ ಎಲ್ಲರಿಗೂ ಅವಕಾಶ ನೀಡಲಾಗುವುದು. ಕಾರ್ಯಕ್ರಮಕ್ಕೆ ನೋಂದಣಿ ಆರಂಭವಾಗಿಲ್ಲ. ನೋಂದಣಿ ಸಂಬಂಧ ನಿರ್ದೇಶಕರನ್ನು ನೇಮಿಸಲಾಗಿದೆ. ಮುಖ್ಯಮಂತ್ರಿಗಳು ಜೂನ್ 8ಕ್ಕೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ಅಂದು ಕಾರ್ಯಕ್ರಮದ ರೂಪುರೇಷೆ ಅಂತಿಮವಾಗಲಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ 12 ಸಾವಿರ, ಕೇಂದ್ರ ಸರ್ಕಾರದಿಂದ ಮೂರು ಸಾವಿರ ಸೇರಿ ಒಟ್ಟು 15 ಸಾವಿರ ನೋಂದಣಿ ಆಗಲಿದೆ ಎಂಬ ಮಾಹಿತಿ ಇದೆ. ಆದರೆ ಸದ್ಯಕ್ಕೆ ಯಾವುದು ಅಂತಿಮವಾಗಿಲ್ಲ. ಮುಖ್ಯಮಂತ್ರಿಗಳು ಜೂ.8ಕ್ಕೆ ಬರಲಿದ್ದು ಅಂದು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಶಾಸಕರುಗಳಾದ ಎಸ್.ಎ ರಾಮದಾಸ್, ಎಲ್. ನಾಗೇಂದ್ರ, ಮೇಯರ್ ಸುನಂದಾ ಪಾಲನೇತ್ರಾ, ಯೋಗ ಫೆಡರೇಷನ್‌ ನ ಮುಖ್ಯಸ್ಥರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!