ಹೊಸದಿಗಂತ ಡಿಜಿಟಲ್ ಡೆಸ್ಕ್;
ಉತ್ತರಪ್ರದೇಶದ ಲಖನೌನಲ್ಲಿರುವ ರಾಮ್ ಮನೋಹರ ಲೋಹಿಯಾ ನ್ಯಾಷನಲ್ ಲಾ ಕಾಲೇಜ್ಲ್ಲಿ 19 ವರ್ಷದ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
3ನೇ ವರ್ಷದ ಎಲ್ಎಲ್ಬಿ ಓದುತ್ತಿದ್ದ ಯುವತಿಯ ಹಾಸ್ಟೆಲ್ ರೂಮ್ನಲ್ಲಿ ಮೃತದೇಹ ಪತ್ತಯಾಗಿದ್ದು, ಯುವತಿಯನ್ನು ಎನ್ಐಎನಲ್ಲಿ ಸೇವೆ ಸಲ್ಲಿಸುತ್ತಿರುವ ಐಪಿಎಸ್ ಆಫೀಸರ್ ಪುತ್ರಿ ಎಂದು ಗುರುತಿಸಲಾಗಿದೆ.
ಅನಿಕಾ ಶನಿವಾರ ತಡರಾತ್ರಿ ಹಾಸ್ಟೆಲ್ ಕೊಠಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಕೆಯ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಕೇಸ್ ದಾಖಲಿಸಿಕೊಂಡು ಆಶಿಯಾನಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಅನಿಕಾ ಶನಿವಾರ ಬೇಗನೆ ಹಾಸ್ಟೆಲ್ ರೂಮ್ ಸೇರಿಕೊಂಡಿದ್ದರು. ಎಷ್ಟು ಬಾರಿ ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ಸಿಗಲಿಲ್ಲ. ಹಾಸ್ಟೆಲ್ ರೂಮ್ ಬಾಗಿಲು ಬಡಿದರೂ ಆಕೆ ತೆರೆಯದೇ ಇದ್ದಾಗ ಬಾಗಿಲು ಒಡೆದು ನೋಡಿದ್ದಾರೆ. ಆಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಆಕೆಯಿದ್ದ ಕೊಠಡಿಯಲ್ಲಿ ಯಾವುದೇ ರೀತಿಯ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಸಹ ತಿಳಿದುಬಂದಿದೆ.
ಅಲ್ಲದೇ ಅನಿಕಾ ಅವರ ಬಟ್ಟೆ ಯಥಾಸ್ಥಿತಿಯಲ್ಲಿತ್ತು, ಆಕೆ ದೇಹದಲ್ಲೂ ಯಾವುದೇ ಗಾಯಗಳು ಕಂಡುಬಂದಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.