September 29, 2026
Tuesday, September 29, 2026
spot_img

ಬಣ್ಣಬಣ್ಣದ ಹೂವುಗಳಿಂದ ಕಂಗೊಳಿಸಲಿದೆ ಮೈಸೂರು: ದಸರಾಗೆ ಬರುವ ಪ್ರವಾಸಿಗರಿಗೆ ಕಲರ್‌ಫುಲ್‌ ವೆಲ್ಕಮ್‌

ದಸರಾ ಅಂದರೆ ಕರ್ನಾಟಕದ ಜನರಿಗೆ ಏನೋ ಒಂದು ರೀತಿಯ ಖುಷಿ. ದಸರಾ ಸಮಯದಲ್ಲಿ ಮೈಸೂರಿಗೆ ತೆರಳಿ ಬಣ್ಣಬಣ್ಣದ ಲೈಟ್‌ಗಳನ್ನು ನೋಡಿ, ಇಡೀ ದಿನ ನಡೆಯುವ ವರ್ಣರಂಜಿತ ಕಾರ್ಯಕ್ರಮಗಳನ್ನು ಕುಳಿತು ವೀಕ್ಷಿಸುವುದು ಜನರಿಗೆ ಇಷ್ಟ. ಈ ಬಾರಿ ಹೊಸದೊಂದು ವೈಶಿಷ್ಟ್ಯತೆ ದಸರಾ ಜೊತೆ ಕೈ ಜೋಡಿಸಿದೆ.

ಹೌದು, ಮೈಸೂರು ತೋಟಗಾರಿಕೆ ಇಲಾಖೆ ಈ ಬಾರಿ ಅದ್ಧೂರಿಯಾದ ಮೈಸೂರು ದಸರಾ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದೆ. ಇದಕ್ಕಾಗಿ ಎಲ್ಲ ತಯಾರಿಗಳನ್ನು ಮಾಡಿಕೊಂಡಿದೆ.

ಮೈಸೂರಿಗೆ ಬರುವ ಪ್ರವಾಸಿಗರಿಗೆ ಈ ಬಣ್ಣಬಣ್ಣದ ಹೂವುಗಳು ಕೈ ಬೀಸಿ ಸ್ವಾಗತ ಮಾಡಲಿವೆ. ಈ ಬಾರಿ ಪ್ರಜಾಪ್ರಭುತ್ವದ ಹಬ್ಬ ಎನ್ನುವ ಥೀಮ್‌ನಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಾಡು ಮಾಡಲಾಗಿದೆ. ಈಗಾಗಲೇ ಹೂವು, ಸಸ್ಯಗಳ ಅದ್ಭುತ ಲೋಕ ಸೃಷ್ಟಿಮಾಡಲು ಸಕಲ ಸಿದ್ಧತೆಗಳನ್ನು ನಡೆಸಲಾಗಿದೆ.

ಅಕ್ಟೋಬರ್‌ 11ರಿಂದ 21ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಬೆಳಗ್ಗೆ ಒಂಬತ್ತು ಗಂಟೆಯಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ಫಲಪುಷ್ಪ ಪ್ರದರ್ಶನವನ್ನು ನೋಡಬಹುದಾಗಿದೆ. ಅಕ್ಬೋರ್‌ 11ರ ಬೆಳಗ್ಗೆ ಸಿಎಂ ಡಿ.ಕೆ. ಶಿವಕುಮಾರ್‌ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ತದನಂತರ ಸಾರ್ವಜನಿಕರ ವೀಕ್ಷಣೆಗೆ ಪಾರ್ಕ್‌ ಮುಕ್ತವಾಗಿರಲಿದೆ.

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಇರುವ ಹಾಗೆ ಮೈಸೂರಿನಲ್ಲಿಯೂ ಗಾಜಿನ ಮನೆ ಇದೆ. ಇಲ್ಲಿ ವಿಧಾನಸೌಧದ ಪ್ರತಿಕೃತಿಯನ್ನು ಮಾಡಲಾಗಿದೆ. ಇದರ ಜೊತೆ ಬೋನ್‌ಸಾಯ್‌ ಪ್ರದರ್ಶನವನ್ನು ನೀಡಲಾಗುತ್ತದೆ. ಇಲ್ಲಿ ವಯಸ್ಕರಿಗೆ 60 ರೂಪಾಯಿ, ಮಕ್ಕಳಿಗೆ 30 ರೂಪಾಯಿ, ಆರು ವರ್ಷದ ಒಳಗಿನ ಮಕ್ಕಳಿಗೆ ಫ್ರೀ ಎಂಟ್ರಿ ಇದೆ. ಶಾಲೆಯ ಸಮವಸ್ತ್ರ ಧರಿಸಿ ಬರುವ ಮಕ್ಕಳಿಗೂ ಮಧ್ಯಾಹ್ನ ಒಂದುಗಂಟೆವರೆಗೆ ಉಚಿತ ಪ್ರವೇಶ ಇದೆ.

ಮೈಸೂರು ದಸರಾ ವೀಕ್ಷಣೆಗೆ ಹೋಗುವ ಜನರಿಗೆ ಈ ಬಾರಿ ಹತ್ತಾರು ಕಾರ್ಯಕ್ರಮಗಳು ಸಿಗಲಿವೆ. ಯಾರಿಗೆ ಯಾವ ಕಾರ್ಯಕ್ರಮ ಬೇಕೋ ಅಲ್ಲಿ ಸಮಯ ಕಳೆಯಬಹುದಾಗಿದೆ. ತಪ್ಪದೇ ದಸರಾಗೆ ಭೇಟಿ ನೀಡಿ, ವರ್ಷಕ್ಕೊಮ್ಮೆ ನಡೆಯುವ ಈ ವೈಭೋಗವನ್ನು ಕಣ್ತುಂಬಿಕೊಳ್ಳಿ.

Must Read