ಎನ್.ಇ.ಪಿ. ಮೇಲ್ನೋಟಕ್ಕೆ ಅರ್ಥ ಮಾಡಿಕೊಂಡರೆ ಸಾಲದು: ಸೆಸ್ ನಿರ್ದೇಶಕ ಗೌರೀಶ್

ಹೊಸದಿಗಂತ ವರದಿ,ಕಲಬುರಗಿ:

ದೇಶದ ಎರಡು ಮೂರು ರಾಜ್ಯಗಳನ್ನು ಬಿಟ್ಟರೆ, ಉಳಿದದ್ದೆಲ್ಲಾ ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಪ್ರಯತ್ನ ನಡೆಸುತ್ತಿದ್ದು,ಈ ಹೊಸ ನೀತಿಯನ್ನು ನಾವು ಮೇಲ್ನೋಟಕ್ಕೆ ಮಾತ್ರ ಅರ್ಥ ಮಾಡಿಕೊಂಡರೆ ಸಾಲದು,ಬದಲಾಗಿ ಪೂರ್ಣ ಪ್ರಮಾಣದಲ್ಲಿ ಅರ್ಥೈಸಿಕೊಳ್ಳುವ ಅವಶ್ಯಕತೆ ಇದೆ ಎಂದು ಬೆಂಗಳೂರಿನ ಸೆಸ್ ನಿರ್ದೇಶಕ ಗೌರೀಶ್ ತಿಳಿಸಿದರು.

ಭಾನುವಾರ ಅವರು ನಗರದ ರೋಟರಿ ಕ್ಲಬ್ ಆಫ್ ಗುಲ್ಬರ್ಗ ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಶಿಕ್ಷಣ ತಜ್ಞರ ವಿಶೇಷ ಸಭೆಯಲ್ಲಿ ಭಾಗವಹಿಸಿ,ವಿಷಯ ಮಂಡನೆ ಮಾಡಿ ಮಾತನಾಡಿ,ಹಲವು ರಾಜ್ಯಗಳಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರಯತ್ನ ನಡೆಯುತ್ತಿದ್ದು, ಕರ್ನಾಟಕ, ತೆಲಂಗಾಣ ಸೇರಿದಂತೆ ಎರಡು ಮೂರು ರಾಜ್ಯಗಳಲ್ಲಿ ಮಾತ್ರ ಇದನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ.ಸ್ಕಿಲ್ ಡೆವಲಪ್ಮೆಂಟ್,ವಕೇಶನಲ್ ಡೆವಲಪ್ಮೆಂಟ್ ಸೇರಿದಂತೆ ಎಲ್ಲಾ ಆಯಾಮಗಳ ಗುಣಮಟ್ಟದ ಶಿಕ್ಷಣ ಬಗ್ಗೆ ಇದರಲ್ಲಿ ಸವಿಸ್ತಾರವಾಗಿ ತಿಳಿಸಲಾಗಿದೆ ಎಂದರು.

ಸಮಸ್ಯೆ ಪ್ರತಿಯೊಂದರಲ್ಲೂ ಸ್ವಾಭಾವಿಕ.ಆದರೆ, ಸಮಸ್ಯೆಗಳನ್ನು,ಲೋಪ ದೋಷಗಳನ್ನು ಚರ್ಚಿಸಿ ಬಗೆಹರಿಸುವ ಮೂಲಕ ರಾಜ್ಯದಲ್ಲಿಯೂ ಸಹ ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವ ಪ್ರಯತ್ನ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಆಳವಾಗಿ ಅಧ್ಯಯನ ಮಾಡಿ, ಪರಿಣಾಮಕಾರಿ ಅನುಷ್ಠಾನಕ್ಕೆ ಶ್ರಮ ಹಾಕೋಣ ಎಂದ ಅವರು,ನಮ್ಮ ದೇಶದಲ್ಲಿ ನಮ್ಮದೆಯಾದ ಶಿಕ್ಷಣ ನೀತಿಯೂ ಜಾರಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪ್ರಾರಂಭದ ಹಂತದಿಂದಲೇ ಸವಾಲುಗಳನ್ನು ಎದುರಿಸುವ ಶಕ್ತಿ ತುಂಬಿದೆ.ಹೀಗಾಗಿ ಇದನ್ನು ರದ್ದುಗೊಳಿಸುವ ವಿಚಾರವನ್ನು ಕೈಬಿಟ್ಟು, ಸವಾಲುಗಳನ್ನು ಎದುರಿಸುವ ಇಚ್ಛಾಶಕ್ತಿ ನಮ್ಮಲ್ಲಿ ಬರಬೇಕಾಗಿದೆ.ಹೀಗಾಗಿ ರದ್ದುಗೊಳಿಸುವುದು ಆರೋಗ್ಯಕರವಾದ ಬೆಳವಣಿಗೆಯಲ್ಲ.ಯಾವ ವಿಷಯದಲ್ಲಿ ಚರ್ಚೆ ಆಗಬೇಕು ಆಗಲಿ.ಆದರೆ, ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಉದ್ದೇಶ ಹೊಂದಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸುವ ವಿಚಾರವನ್ನು ಕೈಬಿಡಬೇಕು ಎಂದರು.

ಎ.ಬಿ.ಆರ್.ಎಸ್.ಎಂ. ದಕ್ಷಿಣ ಮಧ್ಯ ಕ್ಷೇತ್ರೀಯ ಕ್ಷೇತ್ರೀಯ ಪ್ರಮುಖರಾದ ಡಾ.ರಘು ಅಕಮಂಚಿ ಮಾತನಾಡಿ, ಮಾನಸಿಕತೆಯ ಮನಸ್ಸುಳ್ಳವರು ಇದಕ್ಕೆ ವಿರೋಧ ವ್ಯಕ್ತಪಡಿಸುತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯೂ ಯಾವುದೇ ಪಕ್ಷದ ಪಾಲಿಟಿಕಲ್ ಅಜೆಂಡಾವಲ್ಲ.ಬದಲಾಗಿ ಕೆಳ ಹಂತದಿಂದ ಮೇಲ ಹಂತದವರೆಗೂ ರಚಿಸಲಾದಂತಹ ನೀತಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ್ ವಹಿಸಿದ್ದರು.ಅತಿಥಿಯಾಗಿ ನಿವೃತ್ತ ಜಿಲ್ಲಾ ನ್ಯಾಯಾಧೀಶ ಕಾಡ್ಲೂರು ಸತ್ಯನಾರಾಯಣಚಾರ್ಯ ವೇದಿಕೆಯಲ್ಲಿ ಇದ್ದರು.ಈ ಸಂದರ್ಭದಲ್ಲಿ ನಿಕಟಪೂರ್ವ ಸಿಂಡಿಕೇಟ್ ಸದಸ್ಯೆ ಪಲ್ಲವಿ ಪಾಟೀಲ್, ರಾಘವೇಂದ್ರ ಕುಲಕರ್ಣಿ ನಿರೂಪಿಸಿದರು.ರಾಘವೇಂದ್ರ ಭೈರಪ್ಪ, ಶ್ರೀಪಾದ ಚವಡಾಪುರಕರ್ ಸೇರಿದಂತೆ ಹಲವು ಶಿಕ್ಷಣ ತಜ್ಞರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!