‘ನಾಡ ಪೆದ ಆಶಾ’ ಅತ್ಯುತ್ತಮ ಚಿತ್ರ: ಕಾಶ್ ಕಾರ್ಯಪ್ಪ,ಬಿ.ಬಿ.ಅಯ್ಯಪ್ಪಗೆ ಅತ್ಯುತ್ತಮ ನಟ ಪ್ರಶಸ್ತಿ

ಹೊಸದಿಗಂತ ವರದಿ ಮಡಿಕೇರಿ:‌ 

ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ “ನಾಡ ಪೆದ ಆಶಾ” ಕೊಡವ ಚಿತ್ರಕ್ಕೆ ಸೌತ್ ಇಂಡಿಯನ್ ಫಿಲಂ ಫೆಸ್ಟಿವಲ್’ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದೆ. ಈ ಚಿತ್ರದ ನಟನೆಗಾಗಿ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹಾಗೂ ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ ಅವರುಗಳಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಫಿಲಂ ಫೆಸ್ಟಿವಲ್ ಗೆ 11,520 ಚಿತ್ರಗಳು ಬಂದಿದ್ದು, ವಿವಿಧ ವಿಭಾಗಗಳಲ್ಲಿ ಆಯ್ಕೆಯಾದ 630 ಚಿತ್ರಗಳಲ್ಲಿ “ನಾಡ ಪೆದ ಆಶಾ” ಕೂಡ ಒಂದು. ಚಿತ್ರ ಪ್ರದರ್ಶನಗೊಳ್ಳುವ ಮೂಲಕ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಸ್ತ್ರೀ ಪ್ರಧಾನ ಕಥಾವಸ್ತುವಿನ “ನಾಡ ಪೆದ ಆಶಾ” 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಗೊಂಡು ಕೊಡಗು ಜಿಲ್ಲೆಯಾದ್ಯಂತ 123 ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ.

ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ನಡೆದ ಅಂತರರಾಷ್ಟ್ರೀಯ ಚಲಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ “ನಾಡ ಪೆದ ಆಶಾ” ಕೊಡವ ಚಿತ್ರ ಇಲ್ಲಿಯವರೆಗೆ ಒಟ್ಟು 10 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ, ವಿಕೆ3 ಪಿಕ್ಚರ್ಸ್ ಬ್ಯಾನರಿನಡಿ ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತೀರ ಯಶೋದ ಪ್ರಕಾಶ್ ನಿರ್ಮಾಣದ ಚಿತ್ರ ಇದಾಗಿದ್ದು, ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರ ಕಾದಂಬರಿಯನ್ನು ಆಧರಿಸಿ ಚಿತ್ರಿಸಲಾಗಿದೆ.

ಚಿತ್ರದಲ್ಲಿ ಬೊಳ್ಳಜಿರ ಬಿ.ಅಯ್ಯಪ್ಪ ನಾಯಕ ನಟರಾಗಿ ಅಭಿನಯಿಸಿದ್ದು, ನೆಲ್ಲಚಂಡ ರಿಷಿ ಪೂವಮ್ಮ, ಅಡ್ಡಂಡ ಅನಿತಾ ಕಾರ್ಯಪ್ಪ, ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ, ವಾಂಚಿರ ವಿಠಲ್ ನಾಣಯ್ಯ, ಚೇರುವಾಳಂಡ ಸುಜಲಾ ನಾಣಯ್ಯ, ಈರಮಂಡ ಹರಿಣಿ ವಿಜಯ್, ಕುಶಿ ಕಾವೇರಮ್ಮ, ಕೇಸರಿ ಬೋಜಮ್ಮ, ಕೊಟ್ಟುಕತ್ತೀರ ಆರ್ಯ ದೇವಯ್ಯ, ಮಾಚಂಗಡ ಶರತ್ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಸಾಲು ಸಾಲು ಪ್ರಶಸ್ತಿಗಳು ದೊರೆಯುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಇಡೀ ಚಿತ್ರ ತಂಡದ ಶ್ರಮದ ಫಲವಾಗಿ ಪ್ರಶಸ್ತಿಗಳು ಬರುತ್ತಿದೆ ಎಂದರು ಜೊತೆಗೆ ಮತ್ತಷ್ಟು ಉತ್ತಮ ಚಿತ್ರಗಳನ್ನು ನಿರ್ದೇಶಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಅತ್ಯುತ್ತಮ ನಟ ಪ್ರಶಸ್ತಿ ವಿಜೇತ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ’ ನಟಿಸಲು ಅವಕಾಶ ಕಲ್ಪಿಸಿದ ಚಿತ್ರತಂಡಕ್ಕೆ ಕೃತಜ್ಞತೆ ಸಲ್ಲಿಸಿದರು. ಇನ್ನು ಮುಂದೆಯೂ ಉತ್ತಮ ಚಿತ್ರಗಳಲ್ಲಿ ಅಭಿನಯಿಸಲು ಈ ಪ್ರಶಸ್ತಿ ಪ್ರೋತ್ಸಾಹವನ್ನು ನೀಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!