ಹೊಸದಿಗಂತ ವರದಿ,ವಿಜಯನಗರ:
ಕನ್ನಡ ವಿಶ್ವವಿದ್ಯಾಲಯದಿಂದ ನೀಡಲಾಗುವ ಪ್ರತಿಷ್ಠಿತ `ನಾಡೋಜ’ ಗೌರವ ಪದವಿ ಈ ಬಾರಿ ಸರ್ವೋಚ್ಛ ನ್ಯಾಯಾಲಯ ದ ವಿಶ್ರಾಂತ ನ್ಯಾಯಾಧೀಶರಾದ ಶಿವರಾಜ್ ವಿ.ಪಾಟೀಲ, ಖ್ಯಾತ ಬರಹಗಾರ ಹಾಗೂ ಚಿಂತಕ ಕುಂ.ವೀರಭದ್ರಪ್ಪ(ಕುಂ.ವೀ) ಹಾಗೂ ಖ್ಯಾತ ಹಿಂದೂಸ್ತಾನಿ ಗಾಯಕ ಧಾರವಾಡದ ಎಂ.ವೆoಕಟೇಶಕುಮಾರ್ ಭಾಜನರಾಗಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಪರಶಿವಮೂರ್ತಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಈ ವಿಷಯ ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯ ಆವರಣದಲ್ಲಿರುವ `ನವರಂಗ’ ಬಯಲು ರಂಗಮoದಿರದಲ್ಲಿ ಏ.೪ ರಂದು ಸಂಜೆ ೬.೩೦ಕ್ಕೆ ಆಯೋಜಿಸಿರುವ ಕನ್ನಡ ವಿಶ್ವವಿದ್ಯಾಲಯದ ೩೩ನೇ ನುಡಿಹಬ್ಬ(ಘಟಿಕೋತ್ಸವ)ದಲ್ಲಿ ರಾಜ್ಯಪಾಲರೂ ಆಗಿರುವ ಕನ್ನಡ ವಿವಿ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ಗಣ್ಯರಿಗೆ `ನಾಡೋಜ’ (ಗೌರವ ಡಾಕ್ಟರೇಟ್) ಪದವಿ ಪ್ರದಾನ ಮಾಡಲಾಗುತ್ತದೆ.
ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ರಾಜಾಸಾಬ್ ಎ.ಎಚ್ ಅವರು ಘಟಿಕೋತ್ಸವ ಭಾಷಣವನ್ನು ನೆರವೇರಿಸಲಿದ್ದಾರೆ.
ಇದೇ ವೇಳೆ ಸಹ ಕುಲಪತಿ ಹಾಗೂ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ ಅವರು ಡಿ.ಲಿಟ್ ಹಾಗೂ ಪಿಎಚ್‌ಡಿ ಪದವಿ ಪ್ರದಾನ ಮಾಡಲಿದ್ದಾರೆ. ಈ ಭಾರಿ ೧೯೮ ವಿದ್ಯಾರ್ಥಿಗಳು ಪಿಎಚ್‌ಡಿ ಪದವಿ, ಏಳು ಜನ ವಿದ್ಯಾರ್ಥಿಗಳು ಡಿ.ಲಿಟ್ ಪದವಿಯನ್ನು ಪಡೆಯಲಿದ್ದಾರೆ ಕುಲಪತಿ ಪ್ರೊ.ಪರಶಿವಮೂರ್ತಿ ಮಾಹಿತಿ ನೀಡಿದರು.