ಹೊಸದಿಗಂತ ವರದಿ, ನಾಗಮಂಗಲ:
ಸಾಲಬಾಧೆಯಿಂದ ಬೇಸತ್ತು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.
ತಾಲೂಕಿನ ಲಾಳನಕೆರೆ ಗ್ರಾಮದ ಕಾಂತೇಗೌಡರ ಮಗ ಜಯರಾಮೇಗೌಡ(65) ಎಂಬುವರೇ ಮಾಡಿದ ಸಾಲ ತೀರಿಸಲಾಗದೆ ಆತ್ಮಸ್ಥೈರ್ಯ ಕಳೆದುಕೊಂಡು ಮದ್ಯದೊಂದಿಗೆ ಕ್ರಿಮಿನಾಶಕ ಬೆರೆಸಿ ಕುಡಿದು ಸಾವನ್ನಪ್ಪಿರುವ ರೈತ.
ಲಾಳನಕೆರೆ ಗ್ರಾಮದಲ್ಲಿ 2.20 ಗುಂಟೆ ಜಮೀನು ಹೊಂದಿದ್ದ ರೈತ ಜಯರಾಮೇಗೌಡ ಕೃಷಿ ಚಟುವಟಿಕೆ ಉದ್ದೇಶಕ್ಕಾಗಿ ಟ್ರಾಕ್ಟರ್ ಸಾಲ ಸೇರಿದಂತೆ ಬೆಳೆ ಬೆಳೆಯುವ ಸಲುವಾಗಿ ಸ್ಥಳೀಯ ಸಹಕಾರ ಸಂಘ ಮತ್ತು ಖಾಸಗಿ ವ್ಯಕ್ತಿಗಳಿಂದ ಕೈ ಸಾಲ ಸೇರಿ ಒಟ್ಟು 8ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ.