ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಕಣ್ಣೂರಿನಲ್ಲಿ ವಾಷಿಂಗ್ ಮೆಷಿನ್ ನೊಳಗೆ ಅವಿತಿದ್ದ ನಾಗರಹಾವೊಂದು ಮನೆ ಮಂದಿಯೆಲ್ಲ ಬೆಚ್ಚಿ ಬೀಳುವಂತೆ ಮಾಡಿದೆ.
ವಾಷಿಂಗ್ ಮೆಷಿನ್ ಒಳಗೆ ಬಟ್ಟೆ ತುಂಡು ಸಿಕ್ಕಿಹಾಕಿಕೊಂಡಿದೆ ಎಂದು ಭಾವಿಸಿ ಅದನ್ನು ತೆಗೆಯಲು ಹೋದವನಿಗೆ ಅದು ನಾಗರ ಹಾವಿನ ಮರಿ ಎಂದು ತಿಳಿದು ಶಾಕ್ ಆಗಿದೆ. ಕೂಡಲೇ ವಾಷಿಂಗ್ ಮೆಷಿನ್ ಒಳಗೆ ಹಾಕಿದ್ದ ತನ್ನ ಕೈ ಹಿಂದಕ್ಕೆ ತೆಗೆದು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೇರಳದ ಕಣ್ಣೂರಿನಲ್ಲಿ ವಾಷಿಂಗ್ ಮೆಷಿನ್ ರಿಪೇರಿ ಮಾಡುತ್ತಿದ್ದ ತಂತ್ರಜ್ಞ ಜನಾರ್ದನನ್ ಕಡಂಬೇರಿ ಅವರು ಬಹುತೇಕ ದುರಸ್ತಿ ಕೆಲಸವನ್ನು ಪೂರ್ಣಗೊಳಿಸಿದ್ದಾರೆ. ರಿಪೇರಿ ಬಳಿಕ ವಾಷಿಂಗ್ ಮೆಷಿನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೇ ಇಲ್ಲವೋ ಎಂದು ನೋಡಲು ವಾಷಿಂಗ್ ಮೆಷಿನ್ ಒಳಗೆ ಇಣುಕಿ ನೋಡಿದ್ದಾರೆ. ಅದರೊಳಗೆ ಬಟ್ಟೆಯ ತುಂಡಿನಂತೆ ಇರುವುದನ್ನು ಗಮನಿಸಿ ಅದನ್ನು ಹೊರತೆಗೆಯಲು ಯಂತ್ರದೊಳಗೆ ಕೈ ಹಾಕಿದರು. ಆದರೆ ಅದು ಬಟ್ಟೆಯ ತುಂಡಲ್ಲ ನಾಗರ ಹಾವಿನ ಮರಿ ಎಂದು ತಿಳಿದು ಕಡಂಬೇರಿಯವರು ಯಂತ್ರದಿಂದ ತನ್ನ ಕೈಯನ್ನು ಬೇಗನೆ ಹೊರತೆಗೆದರು. ಇದರಿಂದಾಗಿ ಹಾವು ಕಡಿತದಿಂದ ಸ್ವಲ್ಪದರಲ್ಲೇ ಪಾರಾದರು. ಅನಂತರ ಅವರು ಇನ್ನೊಬ್ಬ ವ್ಯಕ್ತಿಗೆ ಮಾಹಿತಿ ನೀಡಿದರು.
ಕೆಲವು ದಿನಗಳಿಂದ ಮಷಿನ್ ಕೆಲಸ ಮಾಡುತ್ತಿಲ್ಲ, ಮುಚ್ಚಳವನ್ನು ಮುಚ್ಚಿ ದಿನಗಟ್ಟಲೆ ಇಡಲಾಗಿದೆ. ಹಾವು ಯಂತ್ರದೊಳಗೆ ಹೇಗೆ ಪ್ರವೇಶಿಸಿತು ಎಂಬ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ಮನೆಯವರು ತಿಳಿಸಿದ್ದಾರೆ.