ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡಿನಲ್ಲಿ ಇಂದು ನಾಗರಪಂಚಮಿ ಸಂಭ್ರಮ ಮನೆ ಮಾಡಿದೆ. ಹಿಂದೂ ಧರ್ಮದಲ್ಲಿ ಈ ದಿನ ವಿಶೇಷವಾದ್ದು, ಭಕ್ತಿಯಿಂದ ನಾಗದೇವರನ್ನು ಇಂದು ಪೂಜಿಸಲಾಗುತ್ತದೆ. ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯಾಗಿದ್ದು, ನಾಗರಾಜನಿಗೆ ಇಂದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನಾಗರಪಂಚಮಿ ಹಬ್ಬ ಆಚರಿಸುವುದು ಹೇಗೆ? ಈ ದಿನ ಯಾವ ಕೆಲಸಗಳನ್ನು ಮಾಡಬಾರದು? ಇಲ್ಲಿದೆ ಮಾಹಿತಿ..
ಇಂದು ಮನೆಯವರೆಲ್ಲಾ ಬೆಳಗ್ಗೆಯೇ ಎದ್ದು ಸ್ನಾನ ಮಾಡಿ ಪೂಜೆ ಮಾಡಲು ಅಣಿಯಾಗಬೇಕು, ಇಂದು ಉಪವಾಸ ಮಾಡಿದರೆ ಅತೀ ಶ್ರೇಷ್ಠ ಎನ್ನಲಾಗುತ್ತದೆ. ಮನೆಯ ಮುಂದೆ ಸಗಣಿ ಸಾರಿಸಿ ಎಂಟು ಹಾವುಗಳನ್ನು ಮಾಡಿ ಪೂಜಿಸಲಾಗುತ್ತದೆ.
ಕೆಲವರು ಮನೆಯ ಸಮೀಪ ಇರುವ ಹುತ್ತಕ್ಕೋ ಅಥವಾ ದೇಗುಲದಲ್ಲಿ ಪ್ರತಿಷ್ಠಾಪನೆ ಆಗಿರುವ ನಾಗದೇವರಿಗೆ ಪೂಜೆ ಸಲ್ಲಿಸುತ್ತಾರೆ. ನಾಗದೇವತೆಗೆ ಅರಿಶಿಣ, ಕುಂಕುಮ, ಅಕ್ಕಿ, ನೀರು, ಹೂವು ಹಾಗೂ ಶ್ರೀಗಂಧವನ್ನು ಅರ್ಪಿಸಬಹುದು.
ದೇವರ ನೈವೇದ್ಯಕ್ಕೆ ಹಾಲು, ತುಪ್ಪ ಹಾಗೂ ಸಕ್ಕರೆ ಜೊತೆಗೆ ತಂಬಿಟ್ಟು, ಚಿಗಣಿ, ಕಡ್ಲೆಕಾಳು ನೀಡಬಹುದಾಗಿದೆ. ಮನಸ್ಸಿನಲ್ಲಿ ನಾಗದೇವತೆಯನ್ನು ಪ್ರಾರ್ಥಿಸಿ ಎಲ್ಲ ದೋಷ ಪರಿಹಾರಕ್ಕೆ ಮನವಿ ಮಾಡಬೇಕು, ಕಡೆಗೆ ನಾಗ ಪಂಚಮಿ ಕಥೆಯನ್ನು ಕೇಳಬೇಕು. ಸಂಜೆ ಮತ್ತೊಮ್ಮೆ ಪೂಜೆ ಮಾಡಿ ಸಂಜೆ ಉಪವಾಸ ಮುರಿಯಬೇಕು.
ಹಿಂದೂ ನಂಬಿಕೆಯಲ್ಲಿ ನಾಗರ ಪಂಚಮಿಯ ದಿನ ನಾಗದೇವತೆಯನ್ನು ಪೂಜಿಸಿದರೆ ಜೀವನದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ, ಎಲ್ಲವೂ ಒಳ್ಳೆಯದಾಗುತ್ತದೆ ಎಂದು ನಂಬಲಾಗುತ್ತದೆ. ಈ ದಿನ ಹಾವುಗಳಿಗೆ ಹಾಲುಣಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಈ ದಿನ ಏನು ಮಾಡಬಾರದು?
- ನಾಗರಪಂಚಮಿಯಂದು ಭೂಮಿ ಉಳುಮೆ ಮಾಡಬಾರದು, ಉಳುಮೆಯಿಂದ ಪ್ರಾಣಿಗಳಿಗೆ ಹಾನಿಯಾಗುತ್ತದೆ.
- ಈ ದಿನಂದು ಮರ, ಗಿಡ ಕಡಿಯಬಾದು, ಹಾವುಗಳು ಪೊಠರೆಯಲ್ಲಿ ವಾಸವಾಗಿದ್ದರೆ ಅವುಗಳಿಗೆ ಹಾನಿಯಾಗುತ್ತದೆ.
- ಹಾವುಗಳನ್ನು ಹೊಡೆಯುವುದು, ಅವುಗಳಿಗೆ ನೋವು ಮಾಡುವುದು, ಪ್ರಾಣಿಗಳಿಗೆ ದಯೆ ತೋರದೇ ಇರುವುದು ತಪ್ಪು
- ಅತಿಯಾಗಿ ಹಾಲು ಪೋಲು ಮಾಡಿ ಹುತ್ತ ಹಾಳುಮಾಡಬಾರದು