ಹೊಸದಿಗಂತ ಡಿಜಿಟಲ್ ಡೆಸ್ಕ್:
ಔರಂಗಝೇಬ್ ಸಮಾಧಿ ತೆರವುಗೊಳಿಸಬೇಕು ಎಂದು ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಕುರಾನ್‌ನ್ನು ಸುಡಲಾಗಿದೆ ಎನ್ನುವ ಸುದ್ದಿ ಹರಡಿದೆ. ಈ ಕಾರಣದಿಂದ ನಾಗ್ಪುರ ಹೊತ್ತಿ ಉರಿಯುತ್ತಿದ್ದು, ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಎಲ್ಲರೂ ಶಾಂತಿ ಕಾಪಾಡಿಕೊಳ್ಳಿ ಎಂದು ಸಿಎಂ ದೇವೇಂದ್ರ ಫಡ್ನವಿಸ್ ಮನವಿ ಮಾಡಿದ್ದಾರೆ. ಸೋಮವಾರ ರಾತ್ರಿ ನಾಗ್ಪುರದ ಮಹಲ್ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ತೀವ್ರ ವಾಗ್ವಾದ ನಡೆಯಿತು. ಎರಡೂ ಕಡೆಯಿಂದ ಕಲ್ಲು ತೂರಾಟ, ಧ್ವಂಸ ಮತ್ತು ವಾಹನಗಳಿಗೆ ಬೆಂಕಿ ಹಚ್ಚುವ ಕೃತ್ಯಗಳು ನಡೆದವು. ಅಶಿಸ್ತಿನ ಗುಂಪನ್ನು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಬೇಕಾಯಿತು.
ಕಲ್ಲು ತೂರಾಟಗಾರರನ್ನು ತಡೆಯಲು ಪ್ರಯತ್ನಿಸುತ್ತಿದ್ದಾಗ ಪೊಲೀಸರೂ ಗಾಯಗೊಂಡರು. ಕಲ್ಲು ತೂರಾಟದಲ್ಲಿ 8 ರಿಂದ 10 ಪೊಲೀಸರು ಗಾಯಗೊಂಡಿದ್ದಾರೆ. ಬೆಂಕಿ ನಂದಿಸಲು ಬಂದ ನಾಲ್ವರು ಅಗ್ನಿಶಾಮಕ ದಳದ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ನಿನ್ನೆಯ ಘಟನೆಯ ನಂತರ ನಾಗ್ಪುರದಲ್ಲಿ ಈಗ ಉದ್ವಿಗ್ನ ವಾತಾವರಣ ನೆಲೆಸಿದೆ.
ಮಹಲ್ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸರು ಮನೆ ಮನೆಗೆ ತೆರಳಿ ನಡೆಸಿದ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಸುಮಾರು 50 ಜನರನ್ನು ಬಂಧಿಸಿದ್ದಾರೆ. ಏತನ್ಮಧ್ಯೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ನಾಗ್ಪುರದ ಜನರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ನಾಗ್ಪುರದ ಎಲ್ಲಾ ಜನರು ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದಿದ್ದಾರೆ.