ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶಾದ್ಯಂತ ಆಕ್ರೋಶ ವ್ಯಕ್ತವಾಗುವ ಪೈಶಾಚಿಕ ಕೃತ್ಯವೊಂದು ಮಣಿಪುರದಲ್ಲಿ ನಡೆದಿದೆ.
ಇಬ್ಬರು ಮಹಿಳೆಯರನ್ನು ಪುರುಷರ ಗುಂಪೊಂದು ಕ್ಯಾಮೆರಾ ಮುಂದೆ ಬೆತ್ತಲೆ ಮೆರವಣಿಗೆ ನಡೆಸಿ ಲೈಂಗಿಕ ಕಿರುಕುಳ ನೀಡಿದೆ, ಇಷ್ಟೇ ಅಲ್ಲದೇ ಸಾಮೂಹಿಕ ಅತ್ಯಾಚಾರವನ್ನೂ ಎಸಗಲಾಗಿದೆ.
ಬೆತ್ತಲೆ ಮೆರವಣಿಗೆ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ನಾಗರೀಕ ಸಮಾಜವೇ ತಲೆತಗ್ಗಿಸುವಂತ ಕೃತ್ಯ ಇದಾಗಿದೆ. ಘಟನೆ ಮೇ.3ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಈವರೆಗೂ ಒಂದು ದೂರು ಕೂಡ ಈ ಬಗ್ಗೆ ದಾಖಲಾಗಿಲ್ಲ. ಮೇ.೩ರ ಮಧ್ಯಾಹ್ನ ಆಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಜನರ ದೊಡ್ಡ ಗುಂಪು ಗ್ರಾಮಕ್ಕೆ ದಾಳಿಯಿಟ್ಟು ಲೂಟಿ ಮಾಡಿದೆ. ಸಿಕ್ಕ ಸಿಕ್ಕ ಗುಡಿಸಲಿಗೆ ಬೆಂಕಿ ಹಚ್ಚಿದೆ. ಗ್ರಾಮದ ಸದಸ್ಯರು ಪ್ರಾಣ ಉಳಿಸಿಕೊಳ್ಳಲು ಕಾಡಿನೊಳಗೆ ತೆರಳಿದ್ದಾರೆ.
ಇಬ್ಬರು ಮಹಿಳೆಯರನ್ನು ಗುಂಪು ವಶಕ್ಕೆ ಪಡೆದು ಅವರ ಬಟ್ಟೆಗಳನ್ನು ಬಿಚ್ಚಿಸಿದೆ. ಖಾಸಗಿ ಅಂಗಗಳ ಮೇಲೆ ತಮ್ಮ ಕೈಗಳನ್ನು ಇಟ್ಟುಕೊಂಡು ಇಡೀ ಊರಿನಲ್ಲಿ ಮೆರವಣಿಗೆ ಮಾಡಲಾಗಿದೆ. ಅಷ್ಟೇ ಅಲ್ಲದೇ ರಸ್ತೆಯಲ್ಲೇ ಅತ್ಯಾಚಾರ ಮಾಡಿದ್ದಾರೆ, ಅಡ್ಡಬಂದ ಕುಟುಂಬದವರನ್ನು ಗುಂಡಿಕ್ಕಿ ಕೊಂದಿದ್ದಾರೆ.
ಈ ವಿಡಿಯೋ ವೈರಲ್ ಆದ ನಂತರ ಮತ್ತೆ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.