ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಿ.ಎಸ್.ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳು ಮಾಡಿದ ಅಭಿವೃದ್ಧಿ ಯೋಜನೆಗಳು, ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ನಿರ್ಮಾಣ ಮಾಡಿದ ಮೂಲಭೂತ ಸೌಕರ್ಯಗಳ ಬಗ್ಗೆ ರಾಜ್ಯದ ಜನತೆಗೆ ಸಂಪೂರ್ಣ ಮೆಚ್ಚುಗೆಯಿದೆ. ಇದರಿಂದ ಜನಮತ ಬಿಜೆಪಿಗೆ ಸಿಗಲಿದೆ ಎಂದರು.
ಸಿದ್ದರಾಮಯ್ಯ, ಡಿಕೆಶಿ ಸೋಲು ಖಚಿತ
ಈ ವೇಳೆ ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ವರಣಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಸೋಲುವುದು ಖಚಿತ. ಹಾಗಿದ್ದರೂ ಮುಖ್ಯಮಂತ್ರಿ ಹುದ್ದೆಗಾಗಿ ಕಾಂಗ್ರೆಸ್ನಲ್ಲಿ ಒಳ ಜಗಳ ನಡೆದಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಬಜರಂಗ ದಳ ನಿಷೇಧದ ದ್ವೇಷದ ರಾಜಕಾರಣ, ಸುಳ್ಳು ಭರವಸೆ, ಗ್ಯಾರಂಟಿ ಕಾರ್ಡ್ಗಳು- ಇವೆಲ್ಲ ಕಾಂಗ್ರೆಸ್ ಭವಿಷ್ಯ ಏನು ಎಂಬುದನ್ನು ಈಗಾಗಲೇ ಜನತೆ ತೋರಿಸಿಕೊಟ್ಟಿದ್ದಾರೆ. 60 ವರ್ಷಗಳ ಸುದೀರ್ಘ ಆಡಳಿತದಲ್ಲಿ ಕಾಂಗ್ರೆಸ್ನವರು ಕೊಡಲಾಗದ ಗ್ಯಾರಂಟಿಗಳನ್ನು ಈಗ ಕೊಡುತ್ತೇವೆ ಅಂತ ಸುಳ್ಳು ಹೇಳ್ತೀರಲ್ಲ ಎಂದು ಕಾಂಗ್ರೆಸ್ ಮುಖಂಡರನ್ನು ನಳಿನ್ ತರಾಟೆಗೆ ತೆಗೆದುಕೊಂಡರು.
ಬಿಜೆಪಿಗೆ ಅಭೂತಪೂರ್ವ ಬೆಂಬಲ
ಪ್ರಧಾನಿ ಮೋದಿ ಚುನಾವಣೆಯ ಮುಂಚೆ 16 ಬಾರಿ, ಚುನಾವಣೆ ಘೋಷಣೆಯಾದ ನಂತರ 20 ಬಾರಿ ರಾಜ್ಯ ಪ್ರವಾಸ ಮಾಡಿದ್ದಾರೆ. ಚುನಾವಣೆ ಪ್ರಚಾರದ ವೇಳೆ ಹೋದ ಕಡೆಗಳೆಲ್ಲಾ ಬಿಜೆಪಿಗೆ ಅಭೂತಪೂರ್ವ ಜನಬೆಂಬಲ ಸಿಗುತ್ತಿದೆ. ಡಬಲ್ ಎಂಜಿನ್ ಸರಕಾರದ ಸಾಧನೆಗಳು ಇಂದು ಜನಸಾಮಾನ್ಯರಿಗೆ ತಲುಪಿವೆ. ಕರ್ನಾಟಕದ ಉದ್ದಗಲಕ್ಕೂ ಜನರ ಸಕಾರಾತ್ಮಕ ಬೆಂಬಲ ಸ್ಪಷ್ಟವಾಗಿ ಕಾಣುತ್ತಿದೆ. ಹೀಗಾಗಿ ಪೂರ್ಣ ಬಹುಮತದ ಸರಕಾರ ಬರುತ್ತದೆ. ಪ್ರಧಾನಿ ಮೋದಿಯವರನ್ನು ಜನರು ಮೆಚ್ಚಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ, ಕೇಂದ್ರ ನಾಯಕ ಅಮಿತ್ ಶಾ, ಬೇರೆ ಬೇರೆ ಮುಖ್ಯಮಂತ್ರಿಗಳು, ಸಚಿವರು, ಕೇಂದ್ರ ಸಚಿವರು ರಾಜ್ಯದಲ್ಲಿ ಬಿಜೆಪಿ ಪರ ವ್ಯಾಪಕ ಪ್ರಚಾರ ಮಾಡಿದ್ದಾರೆ. ಇವೆಲ್ಲವೂ ಪಕ್ಷಕ್ಕೆ ಬಹಳಷ್ಟು ಬಲ ಕೊಟ್ಟಿದೆ ಎಂದು ಭರವಸೆ ವ್ಯಕ್ತಪಡಿಸಿದರು.