ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆಯ ಬಳಿಕ ಮೌನವಾಗಿದ್ದ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದೂ, ರೇಣುಕಾಸ್ವಾಮಿ ಮಗನ ನಾಮಕರಣ ಶಾಸ್ತ್ರ ಇಂದು ಸಂಭ್ರಮದಿಂದ ನೆರವೇರಿದ್ದು, 5 ತಿಂಗಳ ಬಳಿಕ ಮೊದಲ ಬಾರಿ ರೇಣುಕಾಸ್ವಾಮಿಯ ಮಗ ತನ್ನ ತಾತನ ಮನೆಗೆ ಆಗಮಿಸಿದ್ದು, ರೇಣುಕಾಸ್ವಾಮಿ ಕುಟುಂಬಸ್ಥರು ಆರತಿ ಎತ್ತಿ ಸ್ವಾಗತ ಕೋರಿದ್ದಾರೆ.
ರೇಣುಕಾಸ್ವಾಮಿ ಮುದ್ದಾದ ಮಗನಿಗೆ ಶಶಿಧರ ಸ್ವಾಮಿ ಎಂದು ನಾಮಕರಣ ಮಾಡಲಾಗಿದೆ. ತಂಗಿ ಸುಚೇತರಿಂದ ರೇಣುಕಾಸ್ವಾಮಿ ಪುತ್ರನಿಗೆ ನಾಮಕರಣ ಮಾಡಿದ್ದಾರೆ. ಮಗುವಿನ ಕಿವಿಯಲ್ಲಿ ಶಶಿಧರ ಸ್ವಾಮಿ ಎಂದು ಮೂರು ಸಾರಿ ಹೇಳಿ ಹೆಸರನ್ನು ಇಟ್ಟಿದ್ದಾರೆ.
ನಾಮಕರಣಶಾಸ್ತ್ರ ಮುಗಿದ ಬಳಿಕ ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ್ರು ಪ್ರತಿಕ್ರಿಯೆ ನೀಡಿದ್ದಾರೆ. ಇಂದು ನಮ್ಮ ಸಂಪ್ರದಾಯದಂತೆ ನಾಮಕರಣ ಶಾಸ್ತ್ರ ಮಾಡಿದ್ದೇವೆ. ಗುರುಗಳ ಮಾತಿನಂತೆ ಸಂಕ್ಷಿಪ್ತವಾಗಿ ಮಗುವಿಗೆ ಶಶಿಧರ ಸ್ವಾಮಿ ಎಂದು ಹೆಸರಿಟ್ಟಿದ್ದೇವೆ ಎಂದಿದ್ದಾರೆ.
ರೇಣುಕಾಸ್ವಾಮಿ ಮಗುವನ್ನು ನೋಡಿದಾಗ ಸಂತೋಷವಾಗಿದೆ. ಆದರೆ ಹಳೆಯ ನೋವು ಮರೆಯಲು ಆಗಲ್ಲ. ನನ್ನ ಮಗಳು ರೇಣುಕಾಸ್ವಾಮಿ ಮಗುವಿಗೆ ಅತ್ತೆಯಾಗಬೇಕು. ಶಾಸ್ತ್ರದ ಪ್ರಕಾರ ಸೋದರತ್ತೆಯಿಂದ ಮಗುವಿಗೆ ನಾಮಕರಣ ಮಾಡಿದ್ದೇವೆ.ಸೊಸೆ, ಮೊಮ್ಮಗ ನಮ್ಮ ಮನೆಗೆ ಬಂದಿದ್ದು ಸಂತೋಷವಿದೆ. ನಮ್ಮ ಸಮಾಜದ ಶಾಸ್ತ್ರದಂತೆ ಕಣಕುಪ್ಪೆ ಹಾಗೂ ರಂಭಾಪುರಿ ಶ್ರೀಗಳ ಮಾತಿನಂತೆ ಶಶಿಧರ ಸ್ವಾಮಿ ಎಂದು ನಾಮಕರಣ ಮಾಡಿದ್ದೇವೆ.ಇಷ್ಟು ದಿನ ಮಾಧ್ಯಮ, ಕಾನೂನು, ಪೊಲೀಸರು ನಮಗೆ ಸಹಕಾರ ಕೊಟ್ಟಿದ್ದಾರೆ. ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ಆಗಬೇಕು. ಸರ್ಕಾರ ನಮ್ಮ ಬಗ್ಗೆ ಸಹಾನುಭೂತಿ ತೋರಿಸಬೇಕು. ನನ್ನ ಸೊಸೆಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.