ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಪ್ರಸಿದ್ಧ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 15ರಂದು ಭೇಟಿ ನೀಡಲಿರುವುದು ಖಚಿತವಾಗಿದ್ದು, ಮಠ ಮತ್ತು ಜಿಲ್ಲಾಡಳಿತ ಭಾರೀ ಸಿದ್ಧತೆಯಲ್ಲಿ ತೊಡಗಿವೆ. ಹಲವು ದಿನಗಳಿಂದ ನಿರೀಕ್ಷೆಯಲ್ಲಿದ್ದ ಈ ಭೇಟಿಗೆ ಈಗ ಅಂತಿಮ ಹಂತದ ವ್ಯವಸ್ಥೆಗಳು ನಡೆಯುತ್ತಿವೆ.
ಪ್ರಧಾನಿ ಮೋದಿ ಅವರು ಈ ವೇಳೆ ಶ್ರೀ ಆದಿಚುಂಚನಗಿರಿ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ಪರಮಪೂಜ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಗದ್ದುಗೆ ಹಾಗೂ ಶ್ರೀ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲಿದ್ದಾರೆ. ಬಳಿಕ ಬಿಜಿಎಸ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡುವ ನಿರೀಕ್ಷೆಯಿದೆ.
ಇದನ್ನೂ ಓದಿ:
ಮೂಲತಃ ಫೆಬ್ರವರಿಯಲ್ಲೇ ಈ ಕಾರ್ಯಕ್ರಮ ನಡೆಯಬೇಕಾಗಿದ್ದರೂ, ಕೆಲವು ಕಾರಣಗಳಿಂದ ಪ್ರಧಾನಿಯ ಭೇಟಿ ಮುಂದೂಡಲ್ಪಟ್ಟಿತ್ತು. ಇದೀಗ ಏಪ್ರಿಲ್ 15ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದು, ಅಧಿಕೃತ ಪ್ರವಾಸ ವೇಳಾಪಟ್ಟಿ ಪ್ರಕಟವಾಗುವುದು ಮಾತ್ರ ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುತ್ತಿದ್ದು, ಮಠದ ಆವರಣದಲ್ಲಿ ವಿಶೇಷ ಪೊಲೀಸ್ ಬಂದೋಬಸ್ತ್, ವಾಹನ ತಪಾಸಣೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಕೆಲವು ನಿರ್ಬಂಧಗಳು ಜಾರಿಯಾಗುವ ಸಾಧ್ಯತೆ ಇದೆ.



