ಹೊಸದಿಗಂತ ವರದಿ ಮಡಿಕೇರಿ:
ಕೆಪಿಸಿಸಿ ಮುಖಂಡರಾದ ನಾಪಂಡ ಮುತ್ತಪ್ಪ ಹಾಗೂ ನಾಪಂಡ ಮುದ್ದಪ್ಪ ಸಹೋದರರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಗೊಂಡರು. ಈ ಮೂಲಕ ಕೊಡಗು ಜಿಲ್ಲಾ ಕಾಂಗ್ರೆಸ್’ನ ‘ಶಕ್ತಿ’ ಮತ್ತಷ್ಟು ಕ್ಷೀಣಿಸಿದೆ. ಬಿಡದಿಯಲ್ಲಿರುವ ತಮ್ಮ ಕಚೇರಿಯಲ್ಲಿ ನಾಪಂಡ ಸಹೋದರರು ಹಾಗೂ ಬೆಂಬಲಿಗರನ್ನು ಕುಮಾರಸ್ವಾಮಿ ಅವರು ಶಲ್ಯ ತೊಡಿಸಿ ಜೆಡಿಎಸ್‍ಗೆ ಬರಮಾಡಿಕೊಂಡರು.
ಎನ್‍ಎಸ್‍ಯುಐ ಮಾಜಿ ಜಿಲ್ಲಾಧ್ಯಕ್ಷ ಜೆ.ತ್ರಿನೇಶ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಲಿಂಗರಾಜು, ಹೊಸಬೀಡು ಹೂವಯ್ಯ ಸೇರಿದಂತೆ ಅನೇಕ ಬೆಂಬಲಿಗರು ಇದೇ ಸಂದರ್ಭ ಜೆಡಿಎಸ್’ಗೆ ಸೇರ್ಪಡೆಗೊಂಡರು. ಈ ಸಂದರ್ಭ ಮಾತನಾಡಿದ ನಾಪಂಡ ಮುತ್ತಪ್ಪ, ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ಕ್ಷೇತ್ರಗಳಲ್ಲಿ ಜೆಡಿಎಸ್ ಬಲವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದರು.
ಸಾಮರಸ್ಯ ಕದಡುವ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಜಿಲ್ಲೆಯ ಮತದಾರರಿಗೆ ಕಾಂಗ್ರೆಸ್‌ಗಿಂತ ಜೆಡಿಎಸ್ ಉತ್ತಮ ಎನ್ನುವುದು ಮನವರಿಕೆಯಾಗಿದೆ. 2018ರಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದಾಗ ಅಂದು ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ 900 ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಲ್ಲದೆ, ಸಂತ್ರಸ್ತರಿಗೆ ನೀಡಿದ ನೆರವನ್ನು ಕೊಡಗಿನ ಜನ ಇಂದಿಗೂ ಮರೆತಿಲ್ಲ. ಸಂಕಷ್ಟಕ್ಕೆ ತಕ್ಷಣ ಸ್ಪಂದಿಸುವ ಜನಪರ ನಾಯಕ ಕುಮಾರಸ್ವಾಮಿ ಅವರಾಗಿದ್ದಾರೆ ಎಂದು ತಿಳಿಸಿದರಲ್ಲದೆ, ನಂತರ ಬಂದ ಸರ್ಕಾರ ಜಿಲ್ಲೆಯನ್ನು ತಿರುಗಿಯೂ ನೋಡಿಲ್ಲವೆಂದು ಆರೋಪಿಸಿದರು.
ಹಿಂಸೆ ಮತ್ತು ಸಮಾಜವನ್ನು ಒಡೆಯುವ ರಾಜಕಾರಣದಿಂದ ಜನ ಬೇಸತ್ತಿದ್ದು, ಜೆಡಿಎಸ್ ಪರ ಒಲವು ಹೆಚ್ಚಾಗುತ್ತಿದೆ. ಪ್ರತಿಯೊಂದು ಜಾತಿ, ಜನಾಂಗಕ್ಕೂ ಜೆಡಿಎಸ್ ಆಡಳಿತವೇ ಉತ್ತಮ ಎನಿಸಿದ್ದು, ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಲಿದೆ ಎಂದು ಮುತ್ತಪ್ಪ ವಿಶ್ವಾಸ ವ್ಯಕ್ತಪಡಿಸಿದರು.