ಹೊಸ ವರ್ಷದ ಪ್ರಯುಕ್ತ ಸಿಎನ್‍ಸಿಯಿಂದ ಹೊನ್ನಾರು ಕಾರ್ಯಕ್ರಮ

ಹೊಸದಿಗಂತ ವರದಿ ಮಡಿಕೇರಿ:‌

ಸೌರಮಾನ ಪಂಚಾಂಗದ ಪ್ರಕಾರ ಕೊಡವರ ಹೊಸ ವರ್ಷ ಎಡಮ್ಯಾರ್ ಪ್ರಯುಕ್ತ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಏ.14ರಂದು ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದ ಕೂಪದಿರ ಕುಟುಂಬದ ಭತ್ತದ ಗದ್ದೆಯಲ್ಲಿ ಜೋಡೆತ್ತಿನ ಮೂಲಕ ಸಕಲ ವಿಧಿ ವಿಧಾನಗಳೊಂದಿಗೆ ಭತ್ತದ ಗದ್ದೆಯಲ್ಲಿ ಉಳುಮೆ (ಹೊನ್ನಾರು) ಕಾರ್ಯ ನಡೆಸಲಾಗುವುದು ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಅಂದು ಸಂಜೆ 6.30ಗಂಟೆಗೆ ಸಿ.ಎನ್.ಸಿ ಆಶ್ರಯದಲ್ಲಿ ಗೋಣಿಕೊಪ್ಪದಲ್ಲಿ ಪೊಂಬೊಳಕ್ ಮೆರವಣಿಗೆ ನಡೆಯಲಿದೆ. ಸೌರಮಾನ ಪಂಚಾಂಗದಂತೆ ಹೊಸ ವರ್ಷ ಎಡಮ್ಯಾರ್ 1ನ್ನು ಸಿ.ಎನ್.ಸಿ ಸಂಘಟನೆ ಕಳೆದ ಹಲವಾರು ವರ್ಷಗಳಿಂದ ಸಾರ್ವತ್ರಿಕವಾಗಿ ಆಚರಿಸುತ್ತಾ ಬಂದಿದೆ. ಕೊಡವ ಜನಾಂಗಕ್ಕೆ ಅಪರೂಪದ ಹಾಗೂ ಅಪೂರ್ವವಾದ ಕ್ಯಾಲೆಂಡರ್ – ಪಂಚಾಂಗವಿದ್ದು ಇದು ಬಹುಸಂಖ್ಯಾತ ಆಡಳಿತ ವ್ಯವಸ್ಥೆಯ ದಿವ್ಯ ನಿಲಕ್ಷ್ಯದಿಂದ ಅದುಮಿಡಲ್ಪಡುತ್ತಾ ಬಂದಿದೆ. ಇದನ್ನು ಪ್ರಾಮಾಣಿಕವಾಗಿ ಸಂಶೋಧಿಸಿ ಸಮಾಜದ ಮುನ್ನೆಲೆಗೆ ತಂದು ಅದರ ಮಹತ್ವ ಮತ್ತು ಸಾಂಸ್ಕೃತಿಕ ಸೊಗಡನ್ನು ಸಾರ್ವತ್ರಿಕವಾಗಿಸಿ ಜನಮಾನ್ಯಗೊಳಿಸಿದ ಕೀರ್ತಿ ಸಿಎನ್‍ಸಿ ಗೆ ಸಲ್ಲುತ್ತದೆ ಎಂದು ನಾಚಪ್ಪ ತಿಳಿಸಿದ್ದಾರೆ.
ಕೊಡವರು ಮೂಲ ವಂಶಸ್ಥ (ರೇಸ್) ಬುಡಕಟ್ಟು ಜನಾಂಗವಾಗಿದ್ದು ಕೃಷಿ ಮತ್ತು ಪಶುಪಾಲನೆ ಅವರ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಭೂಮಿ ತಾಯಿಗೂ ಕೊಡವರಿಗೂ ಇರುವ ಅವಿನಾಭಾವ ಸಂಬಂಧದ ದ್ಯೋತಕವಾಗಿ ಪ್ರತೀ ವರ್ಷ ಎಡಮ್ಯಾರ್ 1 ರಂದು ಸಿ.ಎನ್.ಸಿ ಸಂಘಟನೆ ಭತ್ತದ ಗದ್ದೆಯಲ್ಲಿ ಜೋಡೆತ್ತಿನ ಮೂಲಕ ಸಾಂಪ್ರದಾಯಿಕ ಉಳುಮೆ ಕಾರ್ಯವನ್ನು ನಡೆಸುತ್ತಾ ಬಂದಿದೆ.
ಈ ಬಾರಿ ಬೆಟ್ಟತ್ತೂರು ಗ್ರಾಮದ ಕೂಪದಿರ ಕುಟುಂಬದ ಭತ್ತದ ಗದ್ದೆಯಲ್ಲಿ ಉಳುಮೆ (ಹೊನ್ನಾರು) ಕಾರ್ಯ ಮಾಡಲಾಗುವುದು. ಮೊದಲಿಗೆ ಮನೆಯ ನೆಲ್ಲಕ್ಕಿಯಡಿಯಲ್ಲಿ ಗುರುಕಾರೋಣರಿಗೆ ಹಾಗೂ ಕಾವೇರಿ ಮಾತೆಗೆ ಶ್ರದ್ಧಾಭಕ್ತಿಯ ನಮನ ಸಲ್ಲಿಸಿ ಹಿರಿಯರಿಂದ ಆಶೀರ್ವಾದ ಪಡೆದು ಭತ್ತದ ಗದ್ದೆಗೆ ತೆರಳಲಾಗುವುದು. ಭೂಮಿ ತಾಯಿಗೂ, ಸೂರ್ಯ ದೇವನಿಗೂ ಮತ್ತು ಜೋಡೆತ್ತುಗಳಿಗೂ ನಮನ ಸಲ್ಲಿಸಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಉಳುಮೆ ಕಾರ್ಯ ನೆರವೇರಿಸಲಾಗುವುದು ಎಂದು ನಾಚಪ್ಪ ತಿಳಿಸಿದ್ದಾರೆ.

ಪಂಜಿನ ಮೆರವಣಿಗೆ
ಸಂಜೆ 6.30ಗಂಟೆಗೆ ಎಡಮ್ಯಾರ್ ಪ್ರಯುಕ್ತ ಸಿ.ಎನ್.ಸಿ ಆಶ್ರಯದಲ್ಲಿ ಗೋಣಿಕೊಪ್ಪದ ಆರ್.ಎಂ.ಸಿ ಯಾರ್ಡ್’ನಿಂದ ಉಮಾಮಹೇಶ್ವರಿ ದೇವಾಲಯದವರೆಗೆ ಎಂದಿನಂತೆ ಪೊಂಬೊಳಕ್ ಮೆರವಣಿಗೆ ನಡೆಯಲಿದೆ. ರಾಜ್ಯಾಂಗದತ್ತ ಹಕ್ಕೊತ್ತಾಯಗಳಾದ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ, ಕೊಡವ ರೇಸ್’ನ್ನು ಬುಡಕಟ್ಟು ಜನಾಂಗದ ಪಟ್ಟಿಗೆ ಸೇರಿಸಿ ಸಂವಿಧಾನ ಭದ್ರತೆ ನೀಡಬೇಕು, “ಕೊಡವರ ಧಾರ್ಮಿಕ ಸಂಸ್ಕಾರವಾದ ಕೋವಿಗೆ ಸಂವಿಧಾನದ 25, 26ನೇ ವಿಧಿಯಂತೆ ಸಿಖ್ಖರ ಕಿರ್‍ಪಾಣದ ಮಾದರಿಯಲ್ಲಿ ರಾಜ್ಯಾಂಗ ಭದ್ರತೆ ಸಿಗಬೇಕು ಮತ್ತು ಕೊಡವ ತಕ್ಕ್‍ನ್ನು ಸಂವಿಧಾನದ 8ನೇ ಶೇಡ್ಯೂಲ್‍ಗೆ ಸೇರ್ಪಡೆಗೊಳಿಸಬೇಕೆಂದು ಇದೇ ಸಂದರ್ಭ ಹಕ್ಕೊತ್ತಾಯ ಮಂಡಿಸುವುದಾಗಿ ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!