Monday, December 4, 2023

Latest Posts

ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಮುಂದುವರಿದ ಸಾವಿನ ಸರಣಿ: 108 ರೋಗಿಗಳ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹಾರಾಷ್ಟ್ರದ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ಸರಣಿ ಮುಂದುವರಿದಿದೆ. ಕೇವಲ 8 ದಿನಗಳಲ್ಲಿ 108 ರೋಗಿಗಳು ಸಾವನ್ನಪ್ಪಿದ ಘಟನೆ ಸಂಚಲನ ಮೂಡಿಸಿದೆ. ಸೆಪ್ಟೆಂಬರ್ ಕೊನೆಯ ವಾರದಲ್ಲಿ, ಅಕ್ಟೋಬರ್ ಆರಂಭದ 48 ಗಂಟೆಗಳ ಒಳಗೆ 31 ರೋಗಿಗಳು ಸಾವನ್ನಪ್ಪಿದ್ದಾರೆ. ನಂತರವೂ ಆಸ್ಪತ್ರೆಯಲ್ಲಿ ರೋಗಿಗಳ ಸಾವು ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಒಂದು ಶಿಶು ಸೇರಿದಂತೆ 11 ರೋಗಿಗಳು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಸಾವಿನ ಘಟನೆಗಳ ಬಗ್ಗೆ ಸರ್ಕಾರ ತನಿಖೆಗೆ ಆದೇಶಿಸಿದರೂ ಯಾವುದೇ ಫಲಿತಾಂಶವಿಲ್ಲ.

ಕಳೆದ 24 ಗಂಟೆಗಳಲ್ಲಿ ವೈದ್ಯರು 1,100 ಕ್ಕೂ ಹೆಚ್ಚು ರೋಗಿಗಳನ್ನು ತಪಾಸಣೆ ಮಾಡಿದ್ದಾರೆ. ಹೊಸದಾಗಿ 191 ರೋಗಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಡೀನ್ ತಿಳಿಸಿದ್ದಾರೆ. ಈ ಹಿಂದೆ ಔಷಧಿ ಕೊರತೆಯೇ ರೋಗಿಗಳ ಸಾವಿಗೆ ಕಾರಣ ಎಂದು ವೈದ್ಯರು ಹೇಳಿದ್ದರು. ಸದ್ಯ ಆಸ್ಪತ್ರೆಯಲ್ಲಿ ಔಷಧಗಳ ಕೊರತೆ ಇಲ್ಲ ಎಂದು ಡೀನ್ ಹೇಳುತ್ತಿದ್ದರೂ ರೋಗಿಗಳ ಸಾವು ಮಾತ್ರ ನಿಂತಿಲ್ಲ.

ಯಾವುದೇ ರೋಗಿಗಳು ಔಷಧಿ ಕೊರತೆಯಿಂದ ಸಾವನ್ನಪ್ಪಿಲ್ಲ, ಬದಲಿಗೆ ಅವರ ಸ್ಥಿತಿ ಹದಗೆಟ್ಟಿದ್ದರಿಂದ ಸಾವನ್ನಪ್ಪಿದ್ದಾರೆ ಎಂಬ ಪ್ರತಿಕ್ರಿಯೆ ನೀಡಿದ್ದಾರೆ. ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ 60ಕ್ಕೂ ಹೆಚ್ಚು ಶಿಶುಗಳು ದಾಖಲಾಗಿವೆ, ಮಕ್ಕಳ ಆರೈಕೆಗಾಗಿ ಕೇವಲ ಮೂವರು ದಾದಿಯರು ಮಾತ್ರ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ ಹೇಳಿದರು. ಒಟ್ಟಿನಲ್ಲಿ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸರಣಿ ಸಾವಿನ ಪ್ರಕರಣ ಆತಂಕಕಾರಿಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!