ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಲೆ ಏರಿಕೆಯ ಬಿಸಿಯಿಂದ ಈಗಾಗಲೇ ಕಂಗೆಟ್ಟು ಹೋಗಿರುವ ರಾಜ್ಯದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೊಂದು ಶಾಕ್ ಎದುರಾಗಿದೆ. ಪೆಟ್ರೋಲ್, ಡೀಸೆಲ್, ಮೆಟ್ರೋ, ಬಸ್ ಹಾಗೂ ಹಾಲಿನ ದರ ಏರಿಕೆಯ ಬೆನ್ನಲ್ಲೇ, ಕೆಎಂಎಫ್ (KMF) ನಂದಿನಿ ತುಪ್ಪ ಮತ್ತು ಬೆಣ್ಣೆಯ ದರವನ್ನು ಏಕಾಏಕಿ ಹೆಚ್ಚಳ ಮಾಡಿದೆ. ಇದರ ನೇರ ಪರಿಣಾಮವಾಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬೇಕರಿ ತಿಂಡಿ ತಿನಿಸುಗಳ ಬೆಲೆಯನ್ನು ಹೆಚ್ಚಿಸಲು ಮಾಲೀಕರು ಗಂಭೀರ ಚಿಂತನೆ ನಡೆಸಿದ್ದು, ಇನ್ಮುಂದೆ ಬೇಕರಿ ಪ್ರಿಯರ ಜೇಬಿಗೆ ಭಾರಿ ಕತ್ತರಿ ಬೀಳುವುದು ಖಚಿತವಾಗಿದೆ.
5 ರಿಂದ 20ರೂ. ಹೆಚ್ಚಳದ ಸಾಧ್ಯತೆ
ಹಾಲು, ಬೆಣ್ಣೆ ಮತ್ತು ತುಪ್ಪದ ಬೆಲೆ ಏರಿಕೆಯು ಬೇಕರಿ ಉದ್ಯಮದ ಮೇಲೆ ಭಾರಿ ಹೊಡೆತ ನೀಡಿದೆ. ಬೇಕರಿ ಉತ್ಪನ್ನಗಳ ತಯಾರಿಕೆಗೆ ಬೆಣ್ಣೆ ಮತ್ತು ತುಪ್ಪ ಪ್ರಮುಖ ಕಚ್ಚಾವಸ್ತುಗಳಾಗಿರುವುದರಿಂದ, ಉತ್ಪಾದನಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನಷ್ಟವನ್ನು ಸರಿದೂಗಿಸಲು ಬೆಂಗಳೂರಿನ ಬೇಕರಿ ಮಾಲೀಕರ ಸಂಘವು ವಿವಿಧ ತಿನಿಸುಗಳ ದರವನ್ನು ಐಟಂಗಳಿಗೆ ಅನುಗುಣವಾಗಿ 5 ರಿಂದ ಹಿಡಿದು 20 ರವರೆಗೆ ಹೆಚ್ಚಿಸಲು ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ;
ದುಬಾರಿ ದುನಿಯಾದಲ್ಲಿ ಕಂಗೆಟ್ಟ ಗ್ರಾಹಕ
ನಿತ್ಯ ಬಳಸುವ ಕೇಕ್, ಪಫ್ಸ್, ಬಿಸ್ಕತ್ತು, ಬ್ರೆಡ್ ಸೇರಿದಂತೆ ಪ್ರಮುಖ ಬೇಕರಿ ಖಾದ್ಯಗಳ ಬೆಲೆ ಏರಿಕೆಯಾಗಲಿರುವುದು ಸಂಜೆ ಬ್ರೇಕ್‌ನಲ್ಲಿ ಚಹಾ-ತಿಂಡಿ ಸವಿಯುವ ಮಧ್ಯಮ ವರ್ಗದ ಜನರಿಗೆ ದೊಡ್ಡ ಆಘಾತ ತಂದಿದೆ. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಈ ದುಬಾರಿ ದುನಿಯಾದಲ್ಲಿ ಬದುಕು ನಡೆಸುವುದು ದುಸ್ತರವಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ದಿನದಿಂದ ದಿನಕ್ಕೆ ಗ್ರಾಹಕರ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆಯನ್ನು ತಡೆಯಲು ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.



