Wednesday, February 8, 2023

Latest Posts

POSITIVE STORY | ನೂರರ ಸಂಭ್ರಮದಲ್ಲಿ ನಂದೊಳ್ಳಿ ಶಾಲೆ–ಬಣ್ಣ ಚಿತ್ತಾರದಿಂದ ಅಲಂಕಾರ

– ಪ್ರಭಾವತಿ ಗೋವಿ

ಶತಮಾನೋತ್ಸವದ ಸಂಭ್ರಮದಲ್ಲಿರುವ ಯಲ್ಲಾಪುರ ತಾಲೂಕಿನ ನಂದೊಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂದವನ್ನು ಹೆಚ್ಚಿಸುವಲ್ಲಿ ಬೆಂಗಳೂರಿನ ಉಪಕೃತಿ ಎನ್‌ಜಿಒ ತೊಡಗಿಕೊಂಡಿದೆ. ಕಳೆದೆರಡು ದಿನಗಳಿಂದ ಶಾಲೆಯ ಗೋಡೆಗಳ ಮೇಲೆ, ಕಂಪೌಂಡ್ ಮೇಲೆ ಕಲಿಕೆಯ ಪೂರಕ , ಚಿತ್ತಾರಗಳನ್ನು ಬಿಡಿಸುವ ಮೂಲಕ ಶಾಲೆಯ ಸೊಬಗನ್ನು ಹೆಚ್ಚಿಸಿದ್ದಾರೆ.

ಉಪಕೃತಿ ಎನ್‌ಜಿಒನ ಸ್ಥಾಪಕ ಚಂದನ್ ಎನ್. ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ, ಬುಡಕಟ್ಟು ಜನಾಂಗಗಳು ಇರುವಂತಹ ಸ್ಥಳಗಳಲ್ಲಿ ಶಿಕ್ಷಣಕ್ಕೆ ಇನ್ನಷ್ಟು ಹೆಚ್ಚಿನ ಪ್ರಾಮುಖ್ಯತೆ ದೊರೆಯಬೇಕೆಂಬುದು ನಮ್ಮ ಸಂಸ್ಥೆಯ ಉದ್ದೇಶವಾಗಿದೆ. ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಒಳಗಾಗಿರುವ ಪಾಲಕರು, ಸರ್ಕಾರಿ ಶಾಲೆಗಳ ಕಡೆ ಗಮನಹರಿಸುತ್ತಿಲ್ಲ. ಖಾಸಗಿ ಶಾಲೆಗಳ ವೈಭವದ ಮುಂದೆ ಮಂಕಾಗುತ್ತಿರುವ, ವಿಶೇಷವಾಗಿ ಗ್ರಾಮೀಣ ಭಾಗದ ಸರಕಾರಿ ಶಾಲೆಗಳನ್ನು ಕೈಲಾದಷ್ಟು ಮಟ್ಟಿಗೆ ಸುಂದರಗೊಳಿಸಿ ಆ ಮೂಲಕ ಕಲಿಕೆಗೆ ಸಹಕಾರವಾಗುವಂತಹ ವಾತಾವರಣ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ. ಅಷ್ಟೇ ಅಲ್ಲದೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವಂತಹ ಚಿತ್ರಗಳನ್ನು ಸಹ ಹೊರಗೋಡೆಯ ಮೇಲೆ ರಚಿಸಲಾಗುತ್ತಿದೆ. ನಮ್ಮ ಈ ಕಾರ್ಯಕ್ಕೆ ಅನೇಕ ಸಂಘ ಸಂಸ್ಥೆಗಳು ಪ್ರಾಯೋಜಕತ್ವ ಸಹ ನೀಡುತ್ತಿವೆ. ಈ ಬಾರಿ ನಂದೊಳ್ಳಿ ಶಾಲೆಯು ಶತಮಾನೋತ್ಸವ ಆಚರಿಸಿಕೊಳ್ಳುತ್ತಿದ್ದು, ಈ ಬಾರಿಯ ಕಾರ್ಯಕ್ರಮಕ್ಕೆ ಸೂಕ್ತವಾದದ್ದು ಎಂದು ಇಲ್ಲಿಗೆ ಬಂದಿದ್ದೇವೆ ಎಂದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ವಿನಾಯಕ ಭಟ್ಟ ಮಾತನಾಡಿ, ದೂರದ ಊರಿನಿಂದ ಬಂದು ನಮ್ಮ ಶಾಲೆಯನ್ನು ಸುಂದರಗೊಳಿಸುವತ್ತ ನಿಸ್ವಾರ್ಥ ಸೇವೆ ಮಾಡುತ್ತಿರುವ ಉಪಕೃತಿ ಸಂಸ್ಥೆಗೆ ನಮ್ಮೆಲ್ಲ ಊರ ಜನರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಸುಂದರ ವಾತಾವರಣ ಮಕ್ಕಳ ಕಲಿಕೆಗೆ ಇನ್ನಷ್ಟು ಪೂರಕವಾಗಲಿದ್ದು, ಅಂತೆಯೇ ನಮ್ಮ ಶಾಲೆ ಎಲ್ಲ ಸರಕಾರಿ ಶಾಲೆಗಳಿಗೆ ಮಾದರಿಯಾಗಲಿದೆ ಎಂದರು.

ಬೆಂಗಳೂರಿನಿಂದ ಆಗಮಿಸಿರುವ 24 ಜನರ ಈ ತಂಡವು, ಎರಡು ದಿನಗಳ ಕಾಲ ಶಾಲಾ ಗೋಡೆಗಳ ಮೇಲೆ ಕಲಿಕೆಗೆ, ಸೃಜನಾತ್ಮಕತೆಗೆ ಹಾಗೂ ಅರಿವನ್ನು ಮೂಡಿಸುವ ವಿಶೇಷ ಕಲಾಕೃತಿಗಳನ್ನು ರಚಿಸಿದ್ದಾರೆ. ಇವರ ಕಾರ್ಯಕ್ಕೆ ಶಾಲೆಯ ಮುಖ್ಯ ಶಿಕ್ಷಕ ಭಾಸ್ಕರ್ ನಾಯ್ಕ, ಎಸ್.ಡಿ.ಎಮ್.ಸಿ. ಸದಸ್ಯರು, ಪಾಲಕರು, ಊರ ನಾಗರಿಕರು, ಗ್ರಾಮ ಪಂಚಾಯತಿ ವತಿಯಿಂದ ಸಂಪೂರ್ಣ ಸಹಕಾರ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!