ನಾಪೋಕ್ಲು ದರೋಡೆ ಪ್ರಕರಣ: ಓರ್ವ ಮಹಿಳೆ ಸಹಿತ ಐವರ ಬಂಧನ

ದಿಗಂತ ವರದಿ ಮಡಿಕೇರಿ:

ಕೊಡಗಿನ ನಾಪೋಕ್ಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವೃದ್ಧ ಮಹಿಳೆಯರಿಬ್ಬರನ್ನು ಕಟ್ಟಿಹಾಕಿ ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣಗಳನ್ನು ‌ದರೋಡೆ ಮಾಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶ್ವಸ್ವಿಯಾಗಿದ್ದು, ಐದು ಮಂದಿಯನ್ನು ಬಂಧಿಸಲಾಗಿದೆ.
ಬಂಧಿತರನ್ನು ದಿಲ್ ಬಹದ್ದೂರು ರಾವುಲ್ (54), ಈಶ್ವರ್ ಥಾಪಾ (48 ), ಪ್ರೇಮ್ ಬಹದೂರ್ ಖಡ್ಕಾ (30), ಸುದೀಪ್ ಜೆತಾರ (20) ಹಾಗೂ ಕಮಲಾ ಸಿಂಗ್ ( 32) ಎಂದು ಗುರುತಿಸಲಾಗಿದೆ.
ಬಂಧಿತರೆಲ್ಲರೂ ನೇಪಾಳ ಮೂಲದವರಾಗಿದ್ದು, ನಾಲ್ವರು ರಾಜ್ಯದ ವಿವಿಧ ಕಡೆಗಳಲ್ಲಿ ಸೆಕ್ಯೂರಿಟಿ ಗಾರ್ಡ್’ಗಳಾಗಿ ಕೆಲಸ ಮಾಡುತ್ತಿದ್ದರೆ, ಮತ್ತೊಬ್ಬಾಕೆ ಮನೆ ಕೆಲಸ ಮಾಡುತ್ತಿದ್ದವಳೆನ್ನಲಾಗಿದೆ.
ಬಂಧಿತರಿಂದ 99 ಗ್ರಾಂ. ಚಿನ್ನಾಭರಣಗಳು, ರೂ.42,500 ನಗದು ಸೇರಿದಂತೆ ಒಟ್ಟು ರೂ.5,42,500 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಫೆ.1ರಂದು ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಕೇರಿ ಗ್ರಾಮದ ಮೂಟೇರಿ ಎಂಬಲ್ಲಿ ಇಬ್ಬರು ವೃದ್ದ ಮಹಿಳೆಯರು ವಾಸವಾಗಿದ್ದ ಮನೆಯ ಬಾಗಿಲು ಮುರಿದು ಒಳನುಗ್ಗಿದ ವ್ಯಕ್ತಿಗಳು ಮನೆಯೊಳಗಿದ್ದ ಇಬ್ಬರು ವೃದ್ದ ಮಹಿಳೆಯರನ್ನು ಬೆದರಿಸಿ, ಕಟ್ಟಿಹಾಕಿ, ಹಲ್ಲೆ ನಡೆಸಿ ಮನೆಯಲ್ಲಿದ್ದ ನಗದು ಹಣ ಹಾಗೂ ಚಿನ್ನಾಭರಣಗಳನ್ನು ದೋಚಿಕೊಂಡು ಹೋದ ಬಗ್ಗೆ ಜಾನಕಿ ಎಂಬವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಗಂಭೀರತೆಯನ್ನು ಅರಿತ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರು ಆರೋಪಿಗಳ ಪತ್ತೆಗಾಗಿ ಮಡಿಕೇರಿ ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಡಿ.ಸಿ.ಆರ್.ಬಿ. ನಿರೀಕ್ಷಕರವರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಿ ಮಾರ್ಗದರ್ಶನ ನೀಡಿದ್ದರು.
ಪ್ರಕರಣದ ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಿದ ಅಧಿಕಾರಿ ಹಾಗೂ ಸಿಬ್ಬಂದಿಯವರು ನೇಪಾಳ ಮೂಲದ ಐದು ಜನ ಆರೋಪಿಗಳನ್ನು ರಾಜ್ಯದ ವಿವಿಧ ಕಡೆಯಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ ಎಂದು ಅವರು ವಿವರಿಸಿದ್ದಾರೆ.
ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಗಜೇಂದ್ರ ಪ್ರಸಾದ್ ಅವರ ನೇತೃತ್ವದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತದ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಡಿಸಿಆರ್ ಬಿ ಪೊಲೀಸ್ ನಿರೀಕ್ಷಕ ಐ.ಪಿ ಮೇದಪ್ಪ, ನಾಪೋಕ್ಲು ಪೊಲೀಸ್ ಠಾಣಾ ಉಪನಿರೀಕ್ಷಕ ಎಂ.ಕೆ ಸದಾಶಿವ ಡಿಸಿಆರ್ ಬಿ ಸಿಬ್ಬಂದಿಗಳಾದ ಬಿ.ಎಲ್ ಯೊಗೇಶ್ ಕುಮಾರ್, ನಿರಂಜನ್, ವೆಂಕಟೇಶ್, ಅನಿಲ್ ಕುಮಾರ್, ಸುರೇಶ್, ವಸಂತ, ಶರತ್ ರೈ, ಶಶಿಕುಮಾರ್ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತದ ಸಿಬ್ಬಂದಿ ಕಾಳಿಯಪ್ಪ, ಪ್ರೇಮ್ ಕುಮಾರ್, ಶೋಭಾ, ನಾಪೋಕ್ಲು ಪೊಲೀಸ್ ಠಾಣೆಯ ಎಎಸ್ಐ ಗೋಪಾಲಕೃಷ್ಣ, ಸಿಬ್ಬಂದಿಗಳಾದ ಸಾಜನ್, ನವೀನ್, ಮಧುಸೂಧನ್, ಮಹದೇವ ನಾಯಕ್, ಪಂಚಲಿಂಗಪ್ಪ ಸುತ್ತಿಗೇರಿ, ರೇಖಾ ಡಿ., ರೇಷ್ಮಾ ಭಾಗಮಂಡಲ ಪೊಲೀಸ್ ಠಾಣೆಯ ಇಬ್ರಾಹಿಂ, ನಂಜುಂಡ ಮತ್ತು ಮಡಿಕೇರಿ ಸಂಚಾರಿ ಠಾಣೆಯ ವಿನೋದ್ ಮತ್ತು ಸಿ.ಡಿ.ಆರ್ ವಿಭಾಗದ ರಾಜೇಶ್, ಗಿರೀಶ್, ಮತ್ತು ಪ್ರವೀಣ್ ಕುಮಾರ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದಾಗಿ ಎಸ್ಪಿ ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಯೋ ವೃದ್ದರು ವಾಸವಿರುವ ಮನೆಗಳು ಹಾಗೂ ಒಂಟಿ ಮನೆಗಳಲ್ಲಿ ಅಪರಾಧ ನಡೆಸುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಹೆಚ್ಚಿನ ಅಪರಾಧಗಳಲ್ಲಿ ಹೊರ ರಾಜ್ಯ ಹಾಗೂ ಹೊರ ದೇಶಗಳಿಂದ ಬಂದ ಕೂಲಿ ಕಾರ್ಮಿಕರ ಕೈವಾಡವಿರುವುದು ಗೋಚರಿಸಿದೆ.
ಕೂಲಿ ಕೆಲಸಕ್ಕೆ ಕಾರ್ಮಿಕರನ್ನು ನೇಮಿಸುವಾಗ ಯಾವುದೇ ಗುರುತು ಚೀಟಿಗಳನ್ನು ಪಡೆಯದೆ ಕೆಲಸ ಮಾಡಿಸಿಕೊಳ್ಳಲಾಗುತ್ತಿದ್ದು, ಕಾರ್ಮಿಕರಾಗಿ ಸೇರಿಕೊಂಡ ವ್ಯಕ್ತಿಗಳು ಕೃತ್ಯಗಳನ್ನೆಸಗಿ ಸುಲಭವಾಗಿ ತಲೆಮರೆಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಕೂಲಿ ಕೆಲಸದ ಬಗ್ಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವಾಗ ತಪ್ಪದೇ ಸಂಬಂಧಪಟ್ಟವರ ಗುರುತು ಚೀಟಿಗಳನ್ನು ಹಾಗೂ ಭಾವಚಿತ್ರಗಳನ್ನು ಪಡೆದುಕೊಳ್ಳುವಂತೆ ಪೊಲೀಸ್ ಅಧೀಕ್ಷಕ ಅಯ್ಯಪ್ಪ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!