Sunday, December 4, 2022

Latest Posts

ಸುಂಟಿಕೊಪ್ಪದಲ್ಲಿ ನಾರಾಯಣ ಗುರು ಜಯಂತಿ: ಕ್ರೀಡಾಕೂಟ-ಪ್ರತಿಭಾ ಪುರಸ್ಕಾರ

ಹೊಸದಿಗಂತ ವರದಿ ಮಡಿಕೇರಿ:
ಸುಂಟಿಕೊಪ್ಪದ ಶ್ರೀ ನಾರಾಯಣಗುರು ಬಿಲ್ಲವ ಸೇವಾ ಸಂಘ, ದೇಯಿಬೈದೇತಿ ಬಿಲ್ಲವ ಮಹಿಳಾ ಸಂಘ ಹಾಗೂ ಬಿಲ್ಲವ ವಿದ್ಯಾರ್ಥಿ ಘಟಕದ ಸಂಯುಕ್ತ ಆಶ್ರಯದಲ್ಲಿ ಶ್ರೀ ನಾರಾಯಣಗುರು ಜಯಂತ್ಯುತ್ಸವ, ಬಿಲ್ಲವ ಕ್ರೀಡಾಕೂಟ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಪೂಜಾರಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.5 ರಂದು ಬೆಳಗ್ಗೆ 8.30 ಗಂಟೆಗೆ ಮಾದಾಪುರ ಡಿ.ಚೆನ್ನಮ್ಮ ಪದವಿಪೂರ್ವ ಕಾಲೇಜಿನ ಕೆಳಗಿನ ಮೈದಾನದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾವಳಿಗೆ ಹರದೂರು ಗ್ರಾ.ಪಂ.ಅಧ್ಯಕ್ಷ ಬಿ.ಡಿ.ಪದ್ಮನಾಭ ಹಾಗೂ ಬೇಳೂರು ಗ್ರಾ.ಪಂ ಅಧ್ಯಕ್ಷ ಬಿ.ಎಂ.ಪ್ರಶಾಂತ್ ಚಾಲನೆ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ನ.6 ರಂದು ಬೆಳಗ್ಗೆ 8.30 ಗಂಟೆಗೆ ಸುಂಟಿಕೊಪ್ಪದ ಜಿ.ಎಂ.ಪಿ. ಶಾಲಾ ಮೈದಾನದಲ್ಲಿ ನಡೆಯುವ ವಾಲಿಬಾಲ್, ಥ್ರೋಬಾಲ್, ಹಗ್ಗ ಜಗ್ಗಾಟ ಹಾಗೂ ಇತರೆ ಕ್ರೀಡಾಕೂಟವನ್ನು ಸುಂಟಿಕೊಪ್ಪ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಬಿ.ಎಚ್.ವೇಣುಗೋಪಾಲ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ಠಾಣಾಧಿಕಾರಿ ಬಿ.ಎಸ್.ವಿಠಲ, ಕೆದಕಲ್ ಗ್ರಾ.ಪಂ ಅಧ್ಯಕ್ಷೆ ವಿಸ್ಮಿತಾ, ಮಾದಾಪುರ ಗ್ರಾ.ಪಂ ಅಧ್ಯಕ್ಷೆ ನಿರೂಪ ಉದ್ಘಾಟಿಸಲಿದ್ದಾರೆ ಎಂದು ವೆಂಕಪ್ಪ ಪೂಜಾರಿ ತಿಳಿಸಿದರು.
ನ.13 ರಂದು ಸುಂಟಿಕೊಪ್ಪದ ಮಂಜನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ನಾರಾಯಣ ಗುರು ಜಯಂತ್ಯುತ್ಸವ ಹಾಗೂ ಗುರುಪೂಜೆ ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ಗಣ ಹೋಮ, 8 ಗಂಟೆಗೆ ವಿಶೇಷ ಆಕರ್ಷಣೆಯಾದ ಗುರುವಿನ ಮಂಡಲ ಕಲಾಕೃತಿಯೊಂದಿಗೆ ಗುರು ಪೂಜೋತ್ಸವವನ್ನು ಉಪ್ಪಿನಂಗಡಿಯ ಶ್ರೀ ವಿನಯ್ ಶಾಂತಿ ಹಾಗೂ ತಂಡದವರು ನೆರವೇರಿಸಲಿದ್ದಾರೆ ಎಂದರು.

ಬೆಳಗ್ಗೆ 9 ಗಂಟೆಗೆ ಶ್ರೀ ನಾರಾಯಣ ಗುರು ಮತ್ತು ಕೋಟಿಚೆನ್ನಯ್ಯ ಅವರ ಭಾವಚಿತ್ರ ಹಾಗೂ ಕುಂಭ ಕಳಶದೊಂದಿಗೆ ಪಟ್ಟಣದ ಮುಖ್ಯ ಬೀದಿಗಳಲ್ಲಿ ಭವ್ಯ ಅಲಂಕೃತ ಮಂಟಪದಲ್ಲಿ ಮೆರವಣಿಗೆಯು ಸಾಗಲಿದ್ದು, ವಿಶೇಷ ಆಕರ್ಷಣೆಯಾಗಿ ತುಳು ಚಿತ್ರರಂಗದ ಜನಪ್ರಿಯ ಹಾಸ್ಯ ನಟ ನವರಸರಾಜ ಭೋಜರಾಜ ವಾಮಂಜೂರು ಪಾಲ್ಗೊಳ್ಳಲಿದ್ದಾರೆ.
ಅಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ತುಳು ಚಿತ್ರರಂಗದ ನಟ ಭೋಜರಾಜ ವಾಮಂಜೂರು, ಗ್ರಾ.ಪಂ. ಅಧ್ಯಕ್ಷೆ ಶಿವಮ್ಮ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ವೆಂಕಪ್ಪ ಪೂಜಾರಿ ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಹೋಬಳಿ ನಾರಾಯಣಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ. ಮುಖೇಶ್ ವಹಿಸಲಿದ್ದು, ದಿಕ್ಸೂಚಿ ಭಾಷಣವನ್ನು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಖಜಾಂಜಿ ಪದ್ಮರಾಜ್ ಮಾಡಲಿದ್ದಾರೆ. ಗೌರವ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕಿ ಲೀಲಾವತಿ, ಸಮಾಜ ಸೇವಕ ಡಾ.ಮಂಥರ್ ಗೌಡ, ಸಮಾಜ ಸೇವಕ ನಾಪಂಡ ಮುತ್ತಪ್ಪ, ಸೋಮವಾರಪೇಟೆ ನಾರಾಯಣ ಗುರು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎ.ಭಾಸ್ಕರ, ವೀರಾಜಪೇಟೆ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಬಿ.ಎಂ.ಗಣೇಶ್, ಕುಶಾಲನಗರ ಕೋಟಿ ಚೆನ್ನಯ್ಯ ಬಿಲ್ಲವ ಸಂಘದ ಅಧ್ಯಕ್ಷ ಹೆಚ್.ಬಿ.ರಮೇಶ, ಸುಂಟಿಕೊಪ್ಪ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಗೌರವಾಧ್ಯಕ್ಷ ಬಿ.ಕೆ.ಮೋಹನ, ದೇಯಿಬೈದೇತಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಮಧುನಾಗಪ್ಪ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಬಿ.ಎಸ್.ಪ್ರೀತಮ್ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವ ಅಧ್ಯಕ್ಷ ಬಿ.ಕೆ.ಮೋಹನ್, ಉಪಾಧ್ಯಕ್ಷ ನಾಗೇಶ್ ಪೂಜಾರಿ, ಮಹಿಳಾ ಘಟಕದ ಉಪಾಧ್ಯಕ್ಷೆ ಗೀತಾ, ಸದಸ್ಯ ಅದ್ವೈತ್, ಬಿಲ್ಲವ ಸಂಘದ ವಿಧ್ಯಾರ್ಥಿ ಘಟಕದ ಅಧ್ಯಕ್ಷ ಬಿ.ಎಸ್.ಪ್ರೀತಮ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!