ಹೊಸದಿಗಂತ ವರದಿ, ಅಂಕೋಲಾ:
ಪ್ರಧಾನಿ ನರೇಂದ್ರ ಮೋದಿ ಅವರ 7 ವರ್ಷಗಳ ಆಡಳಿತ ಅವಧಿಯಲ್ಲಿ ದೇಶದಲ್ಲಿ ಅಭಿವೃದ್ಧಿ ಪರ್ವವೇ ನಡೆದಿದ್ದು ಕಳೆದ 70 ವರ್ಷಗಳಲ್ಲಿ ಮಾಡಲಾಗದ ಕೆಲಸಗಳನ್ನು 7 ವರ್ಷಗಳ ಅವಧಿಯಲ್ಲಿ ಸಾಧಿಸಲಾಗಿದೆ ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಹೇಳಿದರು.
ಗೋವಾ ವಿಧಾನಸಭಾ ಚುನಾವಣಾ ಪ್ರಚಾರ ಕಾರ್ಯಕ್ಕೆ ಇಳಿದು ಪತ್ರೋಡಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದಾಮು ಜಿ ನಾಯ್ಕ ಅವರ ಪರವಾಗಿ ಮತಯಾಚಿಸಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು ಇಂದು ದೇಶ ವಿಶ್ವ ಮಟ್ಟದಲ್ಲಿ ಮಾನ್ಯತೆ ಪಡೆದು ಜಾಗತಿಕವಾಗಿ ತಲೆ ಎತ್ತಿ ನಿಲ್ಲಲು ಮೋದಿ ಸರ್ಕಾರದ ಕೊಡುಗೆ ಅಪಾರ ಎಂದು ಹೇಳಿದರು.
ಗೋವಾ ರಾಜ್ಯದಲ್ಲಿ ನಿರಂತರ ಪ್ರಗತಿಗಾಗಿ ಬಿಜೆಪಿಯನ್ನು ಗೆಲ್ಲಿಸುವುದು ಅತ್ಯಗತ್ಯ ಸರಳ, ಸಜ್ಜನ ಅಭ್ಯರ್ಥಿ ದಾಮು ನಾಯ್ಕ ಅವರನ್ನು ಗೆಲ್ಲಿಸಿ ಎಂದು ಶಾಸಕಿ ರೂಪಾಲಿ ನಾಯ್ಕ ಅವರು ಮನವಿ ಮಾಡಿದರು.
ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಾತನಾಡಿ ದೇಶದ ಪ್ರಗತಿ, ಸುಭದ್ರತೆ, ಏಕತೆಗಾಗಿ ಬಿಜೆಪಿ ನೇತೃತ್ವದ ಸರ್ಕಾರ ಹಲವಾರು ಯೋಜನೆಗಳ ಮೂಲಕ ಯಾವುದೇ ತಾರತಮ್ಯ ಇಲ್ಲದೇ ಕೆಲಸ ಮಾಡುತ್ತಿದೆ ಗೋವಾ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಮೂಲಕ ರಾಜ್ಯ ಮತ್ತು ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸುವಂತೆ ಕರೆ ನೀಡಿದರು.
ಪಕ್ಷದ ಅಭ್ಯರ್ಥಿ ದಾಮು ನಾಯ್ಕ ಮಾತನಾಡಿ ಮತ ಯಾಚಿಸಿದರು.