ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಹಾಯಕ ಸಚಿವರು, ಸಂಸ್ಕೃತಿ ಮತ್ತು ಸಂಸದೀಯ ವ್ಯವಹಾರಗಳ ಸಹಾಯಕ ಸಚಿವರು ಹಾಗೂ ಬಿಕಾನೇರ್ ಕ್ಷೇತ್ರದ ಲೋಕಸಭಾ ಸದಸ್ಯರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಒಂದು ಗಮನಾರ್ಹ ಬದಲಾವಣೆಗೆ ಒಮ್ಮತದ ನಿರ್ಧಾರವು ವಹಿಸುವ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ಇದು ಪರಿವರ್ತನೆಯ ಪ್ರಯಾಣಕ್ಕಾಗಿ ಸಾಮೂಹಿಕ ಮನೋಭಾವವನ್ನು ಸಮಗ್ರ ರೀತಿಯಲ್ಲಿ ಪ್ರತಿಬಿಂಬಿಸುತ್ತದೆ. ಇತ್ತೀಚೆಗೆ ಭಾರತವು ಜಾಗತಿಕ ಮಟ್ಟದಲ್ಲಿ ಅನುರಣಿಸಬಲ್ಲ ಇಂತಹ ಐತಿಹಾಸಿಕ ನಿರ್ಧಾರಗಳಿಗೆ ಸಾಕ್ಷಿಯಾಗಿದೆ. ಅವುಗಳಲ್ಲಿ ಒಂದು ಭಾರತದ ಜಿ-20 ಅಧ್ಯಕ್ಷತೆಯ ಭಾಗವಾಗಿ ʻದೆಹಲಿ ಘೋಷಣೆʼಗೆ ಒಮ್ಮತ ನಿರ್ಮಿಸುವುದು ಮತ್ತು ಇನ್ನೊಂದು ʻನಾರಿ ಶಕ್ತಿ ವಂದನ್ ಅಧಿನಿಯಮ್ʼ ವಿಧೇಯಕ ಅಂಗೀಕಾರ. ಜಾಗತಿಕ ಭೌಗೋಳಿಕ ರಾಜಕೀಯ ಸನ್ನಿವೇಶವು ಮತ್ತೊಮ್ಮೆ ವಿವಿಧ ರೀತಿಯ ಪ್ರಕ್ಷುಬ್ಧತೆಗೆ ಸಾಕ್ಷಿಯಾಗುತ್ತಿರುವ ಹೊತ್ತಿನಲ್ಲಿ, ಪ್ರಜಾಪ್ರಭುತ್ವದ ಹೆಮ್ಮೆಯ ತಾಯಿಯ ಮುಕುಟಕ್ಕೆ ಮತ್ತೊಂದು ಗರಿ ಮೂಡಿದೆ.
ಹೊಸ ಸಂಸತ್ ಭವನದ ಮೊದಲ ಶಾಸಕಾಂಗ ಕಾರ್ಯಸೂಚಿಯು ʻಮಹಿಳಾ ನೇತೃತ್ವದ ಅಭಿವೃದ್ಧಿಯೇ ರಾಷ್ಟ್ರದ ಮುಂದಿನ ದಾರಿʼ ಎಂಬ ಧ್ವನಿಯನ್ನು ಹೊರಹೊಮ್ಮಿಸಿದೆ. ʻಸಂಕಲ್ಪವನ್ನು ಸಿದ್ಧಿ ಮಾಡುವʼ ಉತ್ಸಾಹವನ್ನು ಮೋದಿ ಸರ್ಕಾರ ತೋರಿಸಿದ್ದರಿಂದ ಮಹಿಳೆಯರ ಸುದೀರ್ಘ ಹೋರಾಟವು ಬೆಳಕನ್ನು ಕಂಡಿದೆ.
ಸರಳತೆಯು ಅತ್ಯುತ್ತಮ ಐಷಾರಾಮ ಎಂಬ ಮಾತನ್ನು ಆಗಾಗ್ಗೆ ನಾವು ಕೇಳುತ್ತಿರುತ್ತೇವೆ. ಪ್ರಾತಿನಿಧಿಕ ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಪಾಲನ್ನು ಹೆಚ್ಚಿಸಲು 27 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಇದು ಗೋಚರಿಸುತ್ತದೆ. ಅತ್ಯಂತ ಸರಳವಾಗಿ ಹೇಳುವುದಾದರೆ, ದೇಶದ ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ನಾರಿ ಶಕ್ತಿಗೆ ಹಾಲಿ ಅಸ್ತಿತ್ವದಲ್ಲಿರುವ ಕನಿಷ್ಠ ಪ್ರಾತಿನಿಧ್ಯ ಅಥವಾ ಪಾಲು ನೈಸರ್ಗಿಕ ನಿಯಮಕ್ಕೆ ವಿರುದ್ಧವಾಗಿದೆ. ಸಾಮಾಜಿಕ ಕಟ್ಟುಪಾಡುಗಳ ಹೇರುವಿಕೆಯು ಮಹಿಳೆಯನ್ನು ನಿರ್ಧಾರ ತೆಗೆದುಕೊಳ್ಳುವವರನ್ನಾಗಿ ಮಾಡುವ ಬದಲು ಕೊಂಚ ಮಟ್ಟಿಗೆ ಇತರರು ಕೈಗೊಂಡ ನಿರ್ಧಾರವನ್ನು ಪಾಲಿಸುವವರನ್ನಾಗಿ ಮಾಡಿತ್ತು. ಈ ಸವಾಲುಗಳ ನಡುವೆ, ಈ ದೃಷ್ಟಿಕೋನಕ್ಕೆ ಪ್ರತಿಯಾಗಿ ಹಲವಾರು ಅಪವಾದಗಳೂ ಇವೆ.
ಬಲವಾದ ಇಚ್ಛಾಶಕ್ತಿ
ಮಹಿಳೆಯರು ಗಾಜಿನ ಕೋಣೆಯನ್ನು ಒಡೆದು ಹೊರಬಂದಿದ್ದಾರೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದ್ದಾರೆ. ಈಗ ಮೋದಿ ಸರ್ಕಾರವು ಈ ನೈತಿಕ ಆಯ್ಕೆಗೆ ಗೌರವಯುತವಾಗಿ ಆದ್ಯತೆ ನೀಡಿದೆ. ಜೊತೆಗೆ, ಉನ್ನತ ನಿರ್ಧಾರ ತೆಗೆದುಕೊಳ್ಳುವವರಲ್ಲಿ ಮಹಿಳೆಯರ ಪಾತ್ರವನ್ನು ಗುರುತಿಸುವ ಮೂಲಕ ಈ ಐತಿಹಾಸಿಕ ಲೋಪವನ್ನು ಸರಿಪಡಿಸುವ ಬಲವಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ಶಾಸನಸಭೆಗಳಲ್ಲಿ ಲಿಂಗತ್ವ ನ್ಯಾಯವನ್ನು ಪ್ರಸ್ತಾಪಿಸುವ ʻನಾರಿ ಶಕ್ತಿ ವಂದನ್ ಅಧಿನಿಯಮ್ʼ ವಿಧೇಯಕವು ನೈಜ ಒಟ್ಟಾರೆಯಾಗಿ ಪರಿಪೂರ್ಣ ಮತ್ತು ಸಮತೋಲಿತ ನೀತಿ ನಿರೂಪಣೆಗೆ ದಾರಿ ಮಾಡುತ್ತದೆ.
ಸ್ವಾತಂತ್ರ್ಯದ ನಂತರ ಮಹಿಳೆಯರಿಗೆ ಸಮಾನ ಮತದಾನದ ಹಕ್ಕನ್ನು ನೀಡಲು ಅಮೆರಿಕ 144 ವರ್ಷಗಳನ್ನು ತೆಗೆದುಕೊಂಡಿದ್ದು ನಿಜಕ್ಕೂ ವಿಪರ್ಯಾಸ. ಬ್ರಿಟನ್ನಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ದೊರೆಯಲು ಶತಮಾನ ಮನವೊಲಿಕೆ, ದಶಕಗಳ ಪ್ರತಿಭಟನೆ ಮತ್ತು ಒಂದು ವಿಶ್ವ ಯುದ್ಧವೇ ಬೇಕಾಯಿತು. ನಮ್ಮ ಪೂರ್ವಜರು ದೂರದೃಷ್ಟಿಯುಳ್ಳವರಾಗಿದ್ದರು ಮತ್ತು ಸ್ವಾತಂತ್ರ್ಯದ ನಂತರ ಮಹಿಳೆಯರಿಗೂ ಮತದಾನದ ಹಕ್ಕನ್ನು ಖಾತರಿಪಡಿಸಿದರು. ಈಗ ಸ್ವಾತಂತ್ರ್ಯದ 75 ವರ್ಷಗಳ ಬಳಿಕ, ʻಅಮೃತ ಕಾಲʼದ ಯುಗದ ಸಮಯದಲ್ಲಿ, ಭಾರತವು ಮಹಿಳೆಯರಿಗೆ ಮತದಾನದ ಹಕ್ಕಿನಿಂದ ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಅವರಿಗೆ ಪ್ರಾತಿನಿಧ್ಯದ ಹಕ್ಕನ್ನು ವಿಸ್ತರಿಸುವತ್ತ ಮಹತ್ವದ ಹೆಜ್ಜೆ ಇರಿಸಿದೆ.
ಡಾ. ಅಂಬೇಡ್ಕರ್ ಅವರು 1949ರ ನವೆಂಬರ್ 25ರ ತಮ್ಮ ಐತಿಹಾಸಿಕ ಭಾಷಣದಲ್ಲಿ “ವಿರೋಧಾಭಾಸಗಳ ಈ ಜೀವನವನ್ನು ನಾವು ಎಷ್ಟು ಕಾಲ ಮುಂದುವರಿಸಬೇಕು?” ಎಂದು ಸ್ಪಷ್ಟವಾಗಿ ಪ್ರಶ್ನಿಸಿದ್ದರು. ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳ ಬಗ್ಗೆ ಅವರು ಎಚ್ಚರಿಕೆ ನೀಡಿದ್ದರು. ಕಳೆದ 9 ವರ್ಷಗಳಲ್ಲಿ, ಬಡವರ ಪರ ಮತ್ತು ಜನ ಕೇಂದ್ರಿತ ಉಪಕ್ರಮಗಳು ಆ ವಿರೋಧಾಭಾಸಗಳನ್ನು ಪರಿಹರಿಸುತ್ತಿವೆ. 13.5 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ ಎಂಬುದು ಇದಕ್ಕೆ ಸಾಕ್ಷಿಯಾಗಿದೆ. ಐತಿಹಾಸಿಕ ʻನಾರಿ ಶಕ್ತಿ ವಂದನ್ʼ ವಿಧೇಯಕವು ಒಬ್ಬ ವ್ಯಕ್ತಿ, ಒಂದು ಮತ ಮತ್ತು ಒಂದು ಮೌಲ್ಯ ಎಂಬ ಮನೋಭಾವವನ್ನು ಸಾಕಾರಗೊಳಿಸುವ ಮತ್ತೊಂದು ಹೆಜ್ಜೆಯಾಗಿದೆ. ಮತ್ತೊಂದು ದೃಷ್ಟಿಕೋನದಿಂದ ನೋಡಿದಾಗ, ಸ್ತ್ರೀ ಮತ್ತು ಪುರುಷ ಗುಣಲಕ್ಷಣಗಳ ಪರಿಪೂರ್ಣ ಸಮತೋಲನವು ಆಂತರಿಕ ಶಾಂತಿ, ಸಾಮರಸ್ಯ ಮತ್ತು ವೈಯಕ್ತಿಕ ಪರಿಪೂರ್ಣತೆಯನ್ನು ತರುವ ಮೂಲಕ ಸ್ವಯಂ-ಸಾಕ್ಷಾತ್ಕಾರದ ಸ್ಥಿತಿಗೆ ಕಾರಣವಾಗುತ್ತದೆ ಎಂದು ಭಾರತೀಯ ತತ್ವಶಾಸ್ತ್ರ ಹೇಳುತ್ತದೆ. ಭೌತಿಕ ಜಗತ್ತಿನಲ್ಲಿ ಇದೇ ಸಾಮ್ಯತೆಯು ಸಾಮಾಜಿಕ ರಚನೆಯನ್ನು ಬಲಪಡಿಸುವ ಸಾಮರ್ಥ್ಯವನ್ನು ಹೊಂದಿದೆ.
ನಂಬಿಕೆಯು ಮಹಿಳೆಯರ ಸಹಜ ಗುಣ
ಮನುಕುಲದ ಪರಿಪೂರ್ಣತೆ ಮತ್ತು ಸಾಮೂಹಿಕ ಕಲ್ಯಾಣಕ್ಕಾಗಿ ಸ್ತ್ರೀ ಭ್ರಾತೃತ್ವದ ನೈಸರ್ಗಿಕ ಸಾಮರ್ಥ್ಯವನ್ನು ಬಳಸಿಕೊಳ್ಳುವ ಹೊಣೆ ನಮ್ಮ ಮೇಲಿದೆ. ಪರಿಶ್ರಮ, ಸೃಜನಶೀಲತೆ, ತ್ಯಾಗ, ಸಮರ್ಪಣೆ, ಸ್ಥಿತಿಸ್ಥಾಪಕತ್ವ ಮತ್ತು ನಂಬಿಕೆಯು ಮಹಿಳೆಯರ ಸಹಜ ಗುಣಗಳಾಗಿದ್ದು, ಇವು ಪ್ರತಿಷ್ಠಿತ ಮ್ಯಾನೇಜ್ಮೆಂಟ್ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳಿಂದ ನಾಯಕತ್ವ ಕೋರ್ಸ್ ಪ್ರಮಾಣೀಕರಣವನ್ನು ಪಡೆಯದೆಯೂ ನಾಯಕತ್ವದ ಪಾತ್ರವನ್ನು ವಹಿಸಲು ಮಹಿಳೆಯರನ್ನು ಸಮರ್ಥರನ್ನಾಗಿಸಿವೆ. ಕೇವಲ ಅವರಿಗೆ ಸರಿಯಾದ ಸ್ಥಳಾವಕಾಶ ಮಾಡಿಕೊಡುವುದರಿಂದ ಪರಿಸರ ವ್ಯವಸ್ಥೆಯ ಸಾಮರ್ಥ್ಯವನ್ನು ಅಗಾಧವಾಗಿ ಹೆಚ್ಚಿಸಬಹುದು ಮತ್ತು ಇತರರಿಗೆ ಅನುಕರಿಸಲು ಪರಿಪೂರ್ಣ ಮಾದರಿಯನ್ನು ರೂಪಿಸಬಹುದು.
ಬದಲಾವಣೆಯ ಸಾಧನ
128ನೇ ಸಾಂವಿಧಾನಿಕ ತಿದ್ದುಪಡಿ ಕಾಯ್ದೆಯು ಮೋದಿ ಸರ್ಕಾರದ ಪಾಲಿಗೆ ಒಂದು ರಾಜಕೀಯ ಹೆಜ್ಜೆಯಲ್ಲ, ಬದಲಿಗೆ ಅದೊಂದು ನಂಬಿಕೆಯ ಅನುಚ್ಛೇದ. ಜುಲೈ 2003ರಲ್ಲಿ, ರಾಯ್ಪುರದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಂಸತ್ತು ಮತ್ತು ರಾಜ್ಯ ಶಾಸಕಾಂಗದಲ್ಲಿ ಮಹಿಳಾ ಮೀಸಲಾತಿಗಾಗಿ ಬಿಜೆಪಿ ನಿರ್ಣಯವನ್ನು ಅಂಗೀಕರಿಸಲಾಯಿತು. ನಂತರ, ಪಕ್ಷವು ಈ ಪ್ರಯತ್ನವನ್ನು ಸಾಂಸ್ಥಿಕ ಮಟ್ಟದಲ್ಲಿ ಕಾರ್ಯಗತಗೊಳಿಸಿತು ಮತ್ತು ಅದನ್ನು ಪ್ರಣಾಳಿಕೆಯಲ್ಲಿ ಸೇರಿಸಿತು. ಈಗ ಅದು ಇಡೀ ರಾಷ್ಟ್ರಕ್ಕೆ ಬದಲಾವಣೆಯ ಸಾಧನವಾಗಿದೆ.
ಒತ್ತಾಯದಿಂದ ಅನುಮೋದನೆ ನೀಡಿವೆ
ಸಂಸತ್ತಿನ ವಿಶೇಷ ಅಧಿವೇಶನವನ್ನು ಕರೆಯುವುದು ಮತ್ತು ಒಮ್ಮತ ಆಧಾರಿತ ನಿರ್ಧಾರಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳನ್ನು ಜೊತೆಗೂಡಿಸುವುದು ಕಠಿಣ ಕೆಲಸವಾಗಿತ್ತು. ಆದರೆ, ಈ ಉದ್ದೇಶದ ಪಾವಿತ್ರ್ಯವನ್ನು ಪರಿಗಣಿಸಿ ಸರ್ಕಾರ ಈ ಕೆಲಸವನ್ನು ನಿಖರವಾಗಿ ಮಾಡಿದೆ. ಈ ಉದಾತ್ತ ಉದ್ದೇಶವನ್ನು ಈ ಹಿಂದೆ ವಿರೋಧಿಸಿದ್ದ ಕೆಲವು ಪಕ್ಷಗಳು ವಿಧೇಯಕಕ್ಕೆ ತಮ್ಮ ಆಯ್ಕೆಯಿಂದಲ್ಲದೆ, ರಾಜಕೀಯ ಒತ್ತಾಯದಿಂದ ಅನುಮೋದನೆ ನೀಡಿವೆ. ಹಳೆಯ ಸಂಸತ್ ಕಟ್ಟಡವು ಸಂವಿಧಾನ ರಚನಾ ಪ್ರಕ್ರಿಯೆ ಮತ್ತು ಬ್ರಿಟಿಷರಿಂದ ಅಧಿಕಾರ ಹಸ್ತಾಂತರಕ್ಕೆ ಸಾಕ್ಷಿಯಾಯಿತು. ಪ್ರಜಾಪ್ರಭುತ್ವದ ಈ ಹೊಸ ದೇವಾಲಯವು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಸಂವಿಧಾನದ ಆಶಯಗಳ ಅಡಿಯಲ್ಲಿ ಪ್ರಗತಿಪರ ರೀತಿಯಲ್ಲಿ ಆ ಅಧಿಕಾರವನ್ನು ಮತ್ತಷ್ಟು ಹಂಚಿಕೆ ಮಾಡುವ ನಡೆಗೆ ಸಾಕ್ಷಿಯಾಗಿದೆ.
ದೂರದೃಷ್ಟಿಯನ್ನು ಮರು-ರೂಪಿಸುತ್ತವೆ
ಜಾಗತಿಕ ಸವಾಲುಗಳನ್ನು ಸೌಹಾರ್ದಯುತವಾಗಿ ಪರಿಹರಿಸಲು ಭಾರತದ ಪಾತ್ರ ಎಷ್ಟು ಮಹತ್ವದ್ದು ಎಂಬುದು ಇತ್ತೀಚೆಗೆ ಮುಕ್ತಾಯಗೊಂಡ ʻಜಿ -20ʼ ಅಧ್ಯಕ್ಷತೆಯಿಂದ ಸಾಬೀತಾಗಿದೆ. ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವ ಹೊಸ್ತಿಲಲ್ಲಿದೆ. ಇದೇ ವೇಳೆ, ರಾಷ್ಟ್ರವು ರಾಷ್ಟ್ರೀಯ ಸಂಸತ್ತಿನಲ್ಲಿ ಮಹಿಳೆಯರ ಶೇಕಡಾವಾರು ಪ್ರಾತಿನಿಧ್ಯದ ವಿಚಾರದಲ್ಲಿ ಜಾಗತಿಕ ಸರಾಸರಿಯನ್ನು (26.7%) ಮೀರಿದೆ. ಈ ಪ್ರಮಾಣವನ್ನು ಶೆ. 15% ರಿಂದ 33% ಕ್ಕೆ ಹೆಚ್ಚಿಸಲಾಗಿದೆ. ಈ ಪ್ರಮಾಣವು ವಿಶ್ವದ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ ಬಹಳ ಹೆಚ್ಚಾಗಿದೆ. ಇಂತಹ ಹತ್ತಾರು ಮಹತ್ವದ ಕ್ರಮಗಳು ಮಹಿಳಾ ಸಾರಥ್ಯದ 21ನೇ ಶತಮಾನದ ನಾಯಕನಾಗುವ ಭಾರತದ ದೂರದೃಷ್ಟಿಯನ್ನು ಮರು-ರೂಪಿಸುತ್ತವೆ.
ಈ ʻನಾರಿ ಶಕ್ತಿ ವಂದನ ಅಧಿನಿಯಮ್ʼನ ನಿಬಂಧನೆಗಳ ಅನುಷ್ಠಾನಕ್ಕೆ ಮುನ್ನ ಸಾಂವಿಧಾನಿಕ ಪೂರ್ವಾಗತ್ಯದ ಭಾಗವಾಗಿ, ಅನುಚ್ಛೇದ 82ರ ಪ್ರಕಾರ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಮಾಡುವುದು ಕಡ್ಡಾಯವಾಗಿದೆ. ಆ ಮೂಲಕ ಮಹಿಳಾ ನೇತೃತ್ವದ ಕ್ಷೇತ್ರಗಳನ್ನು ಗುರುತಿಸುವ ಕೆಲಸ ಆಗಬೇಕಿದೆ. ಸಾಂವಿಧಾನದ ಆಶಯಕ್ಕೆ ಅನುಗುಣವಾಗಿ ಅದನ್ನು ಜಾರಿಗೆ ತರಲು ಮೋದಿ ಸರ್ಕಾರ ಬದ್ಧವಾಗಿದೆ. ಆದಾಗ್ಯೂ, ಬದಲಾವಣೆಯ ಅನುಭವಕ್ಕೆ ಇಡೀ ರಾಷ್ಟ್ರವು ಸಾಕ್ಷಿಯಾಗಿದೆ. ಪಿತೃಪ್ರಧಾನ ಮನಸ್ಥಿತಿಯಿಂದ ಹೊರಬರುವ ಬಹು ಅಗತ್ಯದ ಬದಲಾವಣೆಯು ವೇಗ ಪಡೆದಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಾರಿ ಶಕ್ತಿ ನಾಯಕತ್ವದ ಈ ಉಜ್ವಲ ಯುಗವನ್ನು ಸ್ವಾಗತಿಸೋಣ.