ಭತ್ತದ ಹೊಟ್ಟಿನಡಿ ಬೀಟೆ ಮರದ ನಾಟಾ ಸಾಗಾಟ: ನಾಲ್ವರ ಬಂಧನ

ಹೊಸದಿಗಂತ ವರದಿ ಕುಶಾಲನಗರ:

ಭತ್ತದ ಹೊಟ್ಟಿನ ಅಡಿಯಲ್ಲಿ ಬೀಟೆ ಮರದ ನಾಟಾಗಳನ್ನು ಸಾಗಾಟ ಮಾಡುವುದನ್ನು ಪತ್ತೆ ಹಚ್ಚಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳು ನಾಲ್ವರನ್ನು ಬಂಧಿಸಿದ್ದು, ಎರಡು ವಾಹನಗಳನ್ನು ಮಾಲು ಸಹಿತ‌ ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಹುಣಸೂರು ತಾಲೂಕಿನ ಗುರುಪುರ ನಿವಾಸಿ ಎಮ್.ಕುಮಾರ (35), ಕಲ್ಲುಕುಣಿಕೆಯ ರಮೇಶ(41), ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿ ಬರಡಿ ಗ್ರಾಮದ ಟಿ.ಆರ್.ರಮೇಶ (29) ಹಾಗೂ ಎಂ.ವಿ.ತಂಗರಾಜ (30) ಎಂದು ಗುರುತಿಸಲಾಗಿದೆ.

ಗುರುವಾರ ರಾತ್ರಿ 10ಗಂಟೆ ಸುಮಾರಿಗೆ ಗುಡ್ಡೆಹೊಸೂರು-ಸಿದ್ದಾಪುರ ಮುಖ್ಯ ರಸ್ತೆಯ ದೊಡ್ಡಬೆಟ್ಟಗೇರಿ ಗ್ರಾಮದಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ, ಟಾಟಾ ಎಸಿ ( ಕೆಎ-45-3317) ಮತ್ತು ಬೊಲೇರೋ ಜೀಪ್ (ಕೆಎ-9ಜೆಡ್-0963)ವಾಹನದಲ್ಲಿ ಭತ್ತದ ಹೊಟ್ಟುಗಳನ್ನು ತುಂಬಿಸಿಕೊಂಡು ಬರುತ್ತಿರುವುದನ್ನು ಕಂಡು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಎರಡೂ ವಾಹನಗಳಲ್ಲಿ ಬೀಟೆ ಮರದ 15 ನಾಟಾಗಳಿರುವುದು ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ನಾಟಾಗಳ ಸಹಿತ ಎರಡೂ ವಾಹನಗಳನ್ನು ವಶಕ್ಕೆ ಪಡೆದ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಾಹನಗಳಲ್ಲಿದ್ದ ನಾಲ್ವರನ್ನು ಬಂಧಿಸಿದ್ದು, ವಶಪಡಿಸಿಕೊಳ್ಳಲಾದ ವಾಹನ ಹಾಗೂ ನಾಟಾಗಳ ಮೌಲ್ಯ 10ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.

ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸೋಮವಾರಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ವಲಯದ ಅರಣ್ಯಾಧಿಕಾರಿ ಕೆ.ವಿ.ಶಿವರಾಮ್, ಉಪ ವಲಯ ಅರಣ್ಯಾಧಿಕಾರಿಗಳಾದ ಕೆ.ಎನ್. ದೇವಯ್ಯ, ಅನಿಲ್‌ ಡಿಸೋಜ, ಕೆ ಎಸ್ ಸುಬ್ರಾಯ, ಅರಣ್ಯ ರಕ್ಷಕರಾದ ಸಿದ್ಧರಾಮ ನಾಟಿಕಾರ್, ರವಿ ಉತ್ನಾಳ್, ಮಂಜೇಗೌಡ ವಿ. ಎಸ್, ಸಚಿನ್ ಟಿ ಕೆ, ವಾಹನ ಚಾಲಕರಾದ ಜೇಮ್ಸ್ ಗಾಲ್ವಿನ್, ಆರ್.ಆರ್.ಟಿ ಸಿಬ್ಬಂದಿಗಳಾದ ಸಿದ್ಧ ಯೋಗೇಶ್ ಸಿ, ಮಂಜ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!