ಹೊಸದಿಗಂತ ಡಿಜಿಟಲ್ ಡೆಸ್ಕ್:
ವೇದಿಕೆಯಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿದ್ದ ಪತ್ನಿ, ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಕಣ್ಣಿನಲ್ಲಿ ಆನಂದಭಾಷ್ಪ ತುಂಬಿಕೊಂಡು ಹೆಮ್ಮೆಯಿಂದ ನೋಡುತ್ತಿದ್ದ ಪತಿ… 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪತಿ ಪತ್ನಿಯ ಭಾವುಕ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ಹೌದು! ಬಾಲಿವುಡ್ ನಟಿ ಯಾಮಿ ಗೌತಮ್ ಮತ್ತು ನಿರ್ದೇಶಕ ಆದಿತ್ಯ ಧರ್ ಅವರ ನಡುವಿನ ಈ ಭಾವುಕ ಕ್ಷಣ ಎಲ್ಲರ ಗಮನ ಸೆಳೆದಿದೆ. ಆರ್ಟಿಕಲ್ 370 ಚಿತ್ರದ ಅಭಿನಯಕ್ಕಾಗಿ ಯಾಮಿ ಗೌತಮ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತ ಸಂದರ್ಭದಲ್ಲಿ ಆದಿತ್ಯ ಧರ್ ಭಾವುಕರಾದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕ್ಯಾಮರಾದ ಗಮನ ಸೆಳೆದ ಆದಿತ್ಯ ಧರ್
ಯಾಮಿ ಗೌತಮ್ ಅವರ ವೃತ್ತಿಜೀವನದ ಪ್ರಮುಖ ಗೌರವಗಳಲ್ಲಿ ಒಂದಾದ ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪತ್ನಿಯ ಹೆಸರನ್ನು ಪ್ರಶಸ್ತಿಗಾಗಿ ಘೋಷಿಸಿದ ಕ್ಷಣದಲ್ಲಿ ಆದಿತ್ಯ ಧರ್ ಅವರ ಮುಖದಲ್ಲಿ ಹೆಮ್ಮೆ ಮತ್ತು ಸಂತಸ ಸ್ಪಷ್ಟವಾಗಿ ಕಾಣಿಸಿಕೊಂಡಿದ್ದು, ಕ್ಯಾಮೆರಾದ ಗಮನ ಸೆಳೆಯಲು ತುಂಬಾ ಹೊತ್ತು ಬೇಕಾಗಿರಲಿಲ್ಲ. ಪತ್ನಿಯ ಸಾಧನೆಯನ್ನು ಹತ್ತಿರದಿಂದ ಕಂಡ ಆದಿತ್ಯ ಅವರ ಹೆಮ್ಮೆ ಕಣ್ಣಲ್ಲಿ ಆನಂದಭಾಷ್ಪವಾಗಿ ಹರಿಯಿತು.
ಪ್ರಶಸ್ತಿ ಸಮಾರಂಭದ ಈ ಕ್ಷಣ ದಂಪತಿಗಳ ವೃತ್ತಿಜೀವನದ ಸಾಧನೆಯಷ್ಟೇ ಅಲ್ಲದೆ, ಪರಸ್ಪರ ಯಶಸ್ಸನ್ನು ಸಂಭ್ರಮಿಸುವ ಸುಂದರ ಕುಟುಂಬದ ಕ್ಷಣವಾಗಿಯೂ ಮೂಡಿಬಂದಿದೆ.
https://www.instagram.com/reel/DdmGfI5NjXM/?stkn=NW4wNzQ2MHVjeXdi



