ಹೊಸದಿಗಂತ ಡಿಜಿಟಲ್ ಡೆಸ್ಕ್:
ದಶಕಗಳ ಕಾಲ ನಿಸ್ವಾರ್ಥ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ ಖ್ಯಾತ ಸಮಾಜ ಸೇವಕಿ ಹಾಗೂ ಸುಮಂಗಲಿ ಸೇವಾ ಆಶ್ರಮದ ಸಂಸ್ಥಾಪಕಿ ಡಾ. ಎಸ್.ಜಿ. ಸುಶೀಲಮ್ಮ ಅವರಿಗೆ ಈ ವರ್ಷದ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಮಹಿಳೆಯರು, ಮಕ್ಕಳು ಮತ್ತು ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.
ಮಹಿಳಾ ಸಬಲೀಕರಣ, ಶಿಶು ಸಂರಕ್ಷಣೆ, ಬಡವರ ಕಲ್ಯಾಣ, ಸ್ವಯಂ ಉದ್ಯೋಗ ತರಬೇತಿ ಮತ್ತು ಮಹಿಳಾ ಒಕ್ಕೂಟಗಳ ರಚನೆ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸುಶೀಲಮ್ಮ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. 1975ರಲ್ಲಿ ಬೆಂಗಳೂರಿನ ಚೋಳನಾಯಕನಹಳ್ಳಿಯಲ್ಲಿ ಸುಮಂಗಲಿ ಸೇವಾ ಆಶ್ರಮವನ್ನು ಸ್ಥಾಪಿಸಿದ ಅವರು, ಅನಾಥರು, ನಿರಾಶ್ರಿತ ಮಹಿಳೆಯರು ಹಾಗೂ ಮಕ್ಕಳಿಗೆ ಆಶ್ರಯ ಮತ್ತು ಶಿಕ್ಷಣದ ಅವಕಾಶ ಕಲ್ಪಿಸಿದ್ದಾರೆ. ಜೊತೆಗೆ ಬಸವಾನಂದ ನರ್ಸರಿ, ಸುಮಂಗಲಿ ಯುವತಿ ಮಂಡಳಿ ಹಾಗೂ ಬಸವಾನಂದ ಹಿರಿಯ ಪ್ರಾಥಮಿಕ ಶಾಲೆ ಆರಂಭಿಸುವ ಮೂಲಕ ಸಾಮಾಜಿಕ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದ್ದಾರೆ.
ಇವರ ಸೇವೆಯನ್ನು ಗುರುತಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಣಿ ಕಿತ್ತೂರು ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಲಭಿಸಿವೆ. ಜಾನಕಿದೇವಿ ಬಜಾಜ್ ಪುರಸ್ಕಾರ, ಮೈಸೂರು ದಸರಾ ಪ್ರಶಸ್ತಿ ಹಾಗೂ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಕೂಡ ಇವರಿಗೆ ಸಂದಿವೆ.



