October 31, 2026
Saturday, October 31, 2026
spot_img

ರಾಷ್ಟ್ರೀಯ ಏಕತಾ ದಿನ: ದೆಹಲಿಯಲ್ಲಿ ‘ರನ್ ಫಾರ್ ಯೂನಿಟಿ’ ಓಟಕ್ಕೆ ಚಾಲನೆ ನೀಡಿದ ಗೃಹ ಸಚಿವ ಅಮಿತ್ ಶಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ 151ನೇ ಜನ್ಮಜಯಂತಿಯ ಅಂಗವಾಗಿ ದೆಹಲಿಯಲ್ಲಿ ಇಂದು (ಶನಿವಾರ) ನಡೆದ ‘ರನ್ ಫಾರ್ ಯೂನಿಟಿ’ ಓಟಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಭಾರತ ಚೂರುಚೂರಾಗಲಿದೆ ಎಂದು ಜಗತ್ತಿನ ರಾಜಕೀಯ ಪಂಡಿತರು ಭವಿಷ್ಯ ನುಡಿದಿದ್ದರು, ಆದರೆ ಪಟೇಲರು ಆ ಕಲ್ಪನೆಯನ್ನೇ ಸುಳ್ಳು ಮಾಡಿದರು ಎಂದು ನೆನಪಿಸಿಕೊಂಡರು.

“ಹಲವಾರು ನಾಯಕರು ಒಟ್ಟಾಗಿ ಒಂದು ಇಡೀ ಜೀವಿತಾವಧಿಯಲ್ಲಿ ಮಾಡಲು ಸಾಧ್ಯವಿಲ್ಲದ ಅಸಾಧ್ಯ ಕೆಲಸವನ್ನು ಸರ್ದಾರ್ ಪಟೇಲ್ ಅವರು ಸ್ವಾತಂತ್ರ್ಯ ಬಂದ ಕೇವಲ 1,218 ದಿನಗಳಲ್ಲಿ ಮಾಡಿ ಮುಗಿಸಿದರು. ನೂರಾರು ಸಂಸ್ಥಾನಗಳನ್ನು ಒಟ್ಟುಗೂಡಿಸಿ, ಇಡೀ ದೇಶವನ್ನು ಒಂದೇ ನೂಲಿನಲ್ಲಿ ಪೋಣಿಸಿದ ಮುತ್ತುಗಳಂತೆ ಜೋಡಿಸಿ ಇವತ್ತಿನ ಅಖಂಡ ಭಾರತದ ನಕ್ಷೆಯನ್ನು ಸೃಷ್ಟಿಸಿದ ಶಿಲ್ಪಿ ಅವರು. ಇಂದು ಅವರು ಕಟ್ಟಿದ ಭಾರತ ಜಗತ್ತಿನ ಮುಂದೆ ಹೆಮ್ಮೆಯಿಂದ ತಲೆ ಎತ್ತಿ ನಿಂತಿದೆ” ಎಂದು ಅಮಿತ್ ಶಾ ಕೊಂಡಾಡಿದರು.

ರಾಷ್ಟ್ರೀಯ ಏಕತಾ ದಿನ

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸರ್ದಾರ್ ಪಟೇಲರ ಜನ್ಮದಿನವಾದ ಅಕ್ಟೋಬರ್ 31 ಅನ್ನು ದೇಶಾದ್ಯಂತ ‘ರಾಷ್ಟ್ರೀಯ ಏಕತಾ ದಿನ’ ವನ್ನಾಗಿ ಆಚರಿಸಲಾಗುತ್ತಿದೆ.

ಕಾರ್ಯಕ್ರಮಕ್ಕೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸರ್ದಾರ್ ಪಟೇಲ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಏಕತಾ ನಗರದಲ್ಲಿರುವ ‘ಸ್ಟ್ಯಾಚು ಆಫ್ ಯೂನಿಟಿ’ ಬಳಿಯ ವ್ಯಾಲಿ ಆಫ್ ಫ್ಲವರ್ಸ್‌ಗೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು ಹಾಗೂ ವಿಶೇಷ ಸಾಂಸ್ಕೃತಿಕ ಪ್ರದರ್ಶನಗಳನ್ನು ವೀಕ್ಷಿಸಿದರು.

ದೇಶದ ಭೌಗೋಳಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಒಗ್ಗಟ್ಟಿಗೆ ಸರ್ದಾರ್ ಪಟೇಲರು ನೀಡಿದ ಕೊಡುಗೆಯನ್ನು ಇಡೀ ದೇಶ ಇಂದು ಅತ್ಯಂತ ಕೃತಜ್ಞತೆಯಿಂದ ಸ್ಮರಿಸುತ್ತಿದೆ.

Must Read