ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ರಾಷ್ಟ್ರವ್ಯಾಪಿ ಜಾತಿ ಗಣತಿ: ರಾಹುಲ್ ಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂಬೇಡ್ಕರ್ ಮತ್ತು ಅವರು ರಚಿಸಿದ ಸಂವಿಧಾನವನ್ನು ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅವಮಾನಿಸುತ್ತಿವೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಮಧ್ಯ ಪ್ರದೇಶದಲ್ಲಿ ನಡೆದ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್ ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ನಡೆಸಲಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಎಂದಿಗೂ ಮಾಡುವುದಿಲ್ಲ. ಏಕೆಂದರೆ ಅವರು ಅದರಿಂದ ಉಂಟಾಗಬಹುದಾದ ಪರಿಣಾಮಗಳು ಅಥವಾ ರಾಜಕೀಯ ಪತನದ ಬಗ್ಗೆ ಹೆದರುತ್ತಾರೆ ಎಂದು ಆರೋಪಿಸಿದರು.

ಸದ್ಯದ ಮೀಸಲಾತಿ ಮಿತಿಯ ಗೋಡೆಯನ್ನು ಒಡೆದು ಕಾಂಗ್ರೆಸ್ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಶೇ 50ರಷ್ಟು ಮೀಸಲಾತಿ ಒದಗಿಸಲು ಮುಂದಾಗುತ್ತದೆ ಮತ್ತು ಈ ಸಂಬಂಧ ಕಾನೂನು ಜಾರಿಗೆ ತರಲಿದೆ ಎಂದರು.

ಬಿಜೆಪಿ ನೇತೃತ್ವದ ಕೇಂದ್ರವು ಕೋಟ್ಯಾಧಿಪತಿಗಳಿಗಾಗಿ ಕೆಲಸ ಮಾಡುತ್ತಿದೆ. ಉದ್ಯೋಗಾವಕಾಶಗಳನ್ನು ಕಸಿದುಕೊಂಡು ದೇಶದ ಸಂಪತ್ತನ್ನು ಕೆಲವೇ ಕೆಲವು ಬಂಡವಾಳಶಾಹಿಗಳಿಗೆ ಹಸ್ತಾಂತರಿಸುವ ಮೂಲಕ ದಲಿತರು, ಹಿಂದುಳಿದವರು, ಆದಿವಾಸಿಗಳು ಮತ್ತು ಬಡವರನ್ನು ಮತ್ತೊಮ್ಮೆ ಗುಲಾಮರನ್ನಾಗಿ ಮಾಡಲಾಗುತ್ತಿದೆ ಎಂದು ದೂರಿದರು.

ಸ್ವಾತಂತ್ರ್ಯ ಪೂರ್ವದಲ್ಲಿದ್ದ ರೀತಿಯಲ್ಲಿ ಬಡವರಿಗೆ ಯಾವುದೇ ಹಕ್ಕುಗಳು ಇಲ್ಲದ ಹಾಗೆ ಮತ್ತು ಶ್ರೀಮಂತರಿಗೆ ಮಾತ್ರ ಎಲ್ಲ ರೀತಿಯ ಹಕ್ಕುಗಳು ಇರುವಂತಹ ಪರಿಸ್ಥಿತಿಯನ್ನು ತರಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಬಯಸುತ್ತವೆ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾಯಿಸಲು ಬಿಜೆಪಿ-ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ ಮತ್ತು ಅದಕ್ಕಾಗಿಯೇ ಅವರು ಕಳೆದ ವರ್ಷದ ಲೋಕಸಭೆ ಚುನಾವಣೆಯಲ್ಲಿ ‘400 ಪಾರ್’ ಎಂಬ ಘೋಷಣೆ ಮೊಳಗಿಸಿದರು ಎಂದು ಆರೋಪಿಸಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!